ರಾಯಪುರ: ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣದ ಸಂಬಂಧ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಮುಖಂಡ ಭೂಪೇಶ್ ಬಘೆಲ್ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಛತ್ತೀಸಗಢದ ಆರ್ಥಿಕ ಅಪರಾಧಗಳ ವಿಭಾಗಕ್ಕೆ (ಇಒಡಬ್ಲ್ಯು) ವರದಿ ಸಲ್ಲಿಸಿದ್ದು, ಅದರ ಆಧಾರದ ಮೇಲೆ ಇಒಡಬ್ಲ್ಯು ಪೊಲೀಸ್ ಠಾಣೆಯಲ್ಲಿ ಮಾರ್ಚ್ 4ರಂದು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.
ಈ ಪ್ರಕರಣದಲ್ಲಿ ₹6000 ಕೋಟಿ ಅಕ್ರಮ ನಡೆದಿದೆ ಎಂದು ಇ.ಡಿ ಅಂದಾಜಿಸಿದೆ.
ಭೂಪೇಶ್ ಬಘೆಲ್, ಆ್ಯಪ್ ಪ್ರವರ್ತಕರಾದ ರವಿ ಉಪ್ಪಲ್, ಸೌರಭ್ ಚಂದ್ರಕರ್, ಶುಭಂ ಸೋನಿ, ಅನಿಲ್ ಕುಮಾರ್ ಅಗರ್ವಾಲ್ ಮತ್ತು ಇತರ 14 ಮಂದಿಯನ್ನು ಎಫ್‌ಐಆರ್‌ನಲ್ಲಿ ಹೆಸರಿಸಲಾಗಿದೆ ಎಂದು ಹಿರಿಯ ಇಒಡಬ್ಲ್ಯು ಅಧಿಕಾರಿ ತಿಳಿಸಿದ್ದಾರೆ.
ಆ್ಯಪ್ ಪ್ರವರ್ತಕರು ಬೆಟ್ಟಿಂಗ್‌ನಿಂದ ಗಳಿಸಿದ ಅಕ್ರಮ ಹಣವನ್ನು ಶೆಲ್ ಕಂಪನಿಗಳು, ಷೇರು ಮಾರುಕಟ್ಟೆ, ಕ್ರಿಪ್ಟೊ ಕರೆನ್ಸಿ ಮುಂತಾದವುಗಳಲ್ಲಿ ತೊಡಗಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ.
ಜಾರಿ ನಿರ್ದೇಶನಾಲಯವು ತನ್ನ ವಿರುದ್ಧ ಜರುಗಿಸಿರುವ ಕ್ರಮವು ‘ರಾಜಕೀಯ ಪಿತೂರಿ’ ಆಗಿದೆ ಎಂದು ಕಾಂಗ್ರೆಸ್ ಮುಖಂಡ ಭೂಪೇಶ್ ಬಘೆಲ್ ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.