ರಾಯಪುರ, ಛತ್ತೀಸಗಢ: ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ನಾಲ್ವರು ಕೊರೊನಾ ಸೋಂಕು ಪೀಡಿತರು ಸಾವಿಗೀಡಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಶನಿವಾರ ರಾತ್ರಿ ರಾಜಧಾನಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ರಾಯಪುರ ಜಿಲ್ಲಾಧಿಕಾರಿ ಭಾರತಿ ದಾಸನ್ ಅವರು ಆದೇಶಿಸಿದ್ದಾರೆ. ನಗರದ ಎಲ್ಲಾ ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿ ಸುರಕ್ಷತಾ ವ್ಯವಸ್ಥೆಗಳ ತಪಾಸಣೆ ನಡೆಸುವಂತೆಯೂ ಅವರು ಸೂಚಿಸಿದ್ದಾರೆ.
‘ಒಬ್ಬರು ಸುಟ್ಟ ಗಾಯಗಳಿಂದ ಮೃತಪಟ್ಟರೆ, ಮೂವರು ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದು, ಆಸ್ಪತ್ರೆಯ ಮಾಲೀಕರ ವಿರುದ್ಧ ನಿರ್ಲಕ್ಷ್ಯದ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ. ಫ್ಯಾನ್‌ನಲ್ಲಿ ಶಾರ್ಟ್ ಸರ್ಕೀಟ್ ಆಗಿದ್ದು, ಬೆಂಕಿಗೆ ಕಾರಣವಾಗಿ, ವೇಗವಾಗಿ ಇತರ ವಾರ್ಡ್‌ಗಳಿಗೆ ವ್ಯಾಪಿಸತೊಡಗಿದೆ.
ಐಸಿಯುನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಮೇಲ್ವಿಚಾರಕರೊಬ್ಬರು ಆಸ್ಪತ್ರೆ ಸಿಬ್ಬಂದಿಗೆ ಎಚ್ಚರಿಸಿದ್ದಾರೆ. ಅಗ್ನಿಶಾಮಕ ದಳ ಮತ್ತು ಆಸ್ಪತ್ರೆ ಸಿಬ್ಬಂದಿ ರೋಗಿಗಳ ರಕ್ಷಣೆಗೆ ಧಾವಿಸಿದ್ದಾರೆ. ಬೆಂಕಿಯನ್ನು ಶಮನಗೊಳಿಸಲು ಒಂದು ಗಂಟೆ ಹಿಡಿದಿದೆ.
ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಘಟನೆಗೆ ಶೋಕ ವ್ಯಕ್ತಪಡಿಸಿದ್ದು, ಸಾವಿಗೀಡಾದವರ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.