ರಾಯಪುರ: ಭಯೋತ್ಪಾದನೆ ಸಂಬಂಧಿತ ವಿಶೇಷ ಪ್ರಕರಣಗಳ ಹಾಗೂ ನಕ್ಸಲ್ ಕೇಸುಗಳ ತ್ವರಿತ ವಿಚಾರಣೆಗೆ ರಾಜ್ಯ ತನಿಖಾ ದಳ (ಎಸ್‌ಐಎ) ಸ್ಥಾಪಿಸಲು ಛತ್ತೀಸಗಢ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಜೊತೆಗೆ ಸಮನ್ವಯಕ್ಕಾಗಿ ಎಸ್‌ಐಎ ರಾಜ್ಯದ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ. ಸೂಪರಿಡೆಂಟೆಂಟ್ ಆಫ್ ಪೊಲೀಸ್ ಸೇರಿ ಒಟ್ಟು 74 ಹುದ್ದೆಗಳನ್ನು ಎಸ್‌ಐಎಗಾಗಿ ರಚಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಉತ್ತಮ ಆಡಳಿತ ಹಾಗೂ ಸಮನ್ವಯಕ್ಕಾಗಿ ಪ್ರತ್ಯೇಕ ಇಲಾಖೆ ರಚನೆಗೂ ಸಚಿವ ಸಂಪುಟ ನಿರ್ಧರಿಸಿದೆ. ಈ ಇಲಾಖೆ ಮೂಲಕ ರಾಜ್ಯ ಸರ್ಕಾರದ ಕಲ್ಯಾಣ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುವುದು ಎಂದು ಹೇಳಲಾಗಿದೆ.
ಛತ್ತೀಸಗಢ ಯೋಜನಾ ಆಯೋಗದ ಹೆಸರನ್ನು ‘ರಾಜ್ಯ ನೀತಿ ಆಯೋಗ, ಛತ್ತೀಸಗಢ’ ಎಂದು ಮರುನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ‘ರಾಷ್ಟ್ರೀಯ ಶಿಕ್ಷಣ ನೀತಿ–2020’ರ ಜಾರಿಗೆ ಛತ್ತೀಸಗಢ ಆರ್ಥಿಕ ಸಲಹಾ ಸಮಿತಿ ರಚಿಸಲು ಸಂಪುಟ ನಿರ್ಧಾರ ಕೈಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.