ನವದೆಹಲಿ: ದುರ್ಗಾ ದೇವಿ ಮೂರ್ತಿಯ ಮೆರವಣಿಗೆಯ ನಡುವೆ ಕಾರು ನುಗ್ಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ಛತ್ತೀಸ್‌ಗಡದ ಜಶ್‌ಪುರದಲ್ಲಿ ಈ ದುರಂತ ಸಂಭವಿಸಿದೆ.
ಉತ್ತರ ಪ್ರದೇಶದ ಲಖಿಂಪುರ–ಖೇರಿಯಲ್ಲಿ ರೈತರ ಮೆರವಣಿಗೆ ಸಮಯದಲ್ಲಿ ಕಾರು ಹರಿದು ಹಲವು ಜನರು ಸಾವಿಗೀಡಾದ ಘಟನೆ ಇತ್ತೀಚೆಗೆ ನಡೆದಿತ್ತು. ಇಂದು ಜಶ್‌ಪುರದ ಪಥಲ್‌ಗಾಂನಲ್ಲಿ ದುರ್ಗಾ ಮೂರ್ತಿಯ ವಿಸರ್ಜನೆಗಾಗಿ ಸಾಗುತ್ತಿದ್ದ ಮೆರವಣಿಯ ಮೇಲೆ ವೇಗವಾಗಿ ಬಂದ ಕಾರೊಂದು ನುಗ್ಗಿರುವುದು ವಿಡಿಯೊದಲ್ಲಿ ದಾಖಲಾಗಿದೆ.
'ಒಂದು ಮೃತ ದೇಹವನ್ನು ಆಸ್ಪತ್ರೆಗೆ ತರಲಾಗಿದೆ, ಇತರೆ 16 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರಿಗೆ ಮೂಳೆ ಮುರಿದಿರುವುದು ಪತ್ತೆಯಾಗಿದೆ' ಎಂದು ವೈದ್ಯಾಧಿಕಾರಿ ಜೇಮ್ಸ್ ಮಿಂಜ್ ಹೇಳಿರುವುದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.
ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೇಗವಾಗಿ ಬಂದ ಕಾರು ಮೆರವಣಿಗೆಯಲ್ಲಿದ್ದ ಜನರಿಗೆ ಡಿಕ್ಕಿ ಹೊಡೆದು ಅದೇ ವೇಗದಲ್ಲಿ ಮುನ್ನುಗ್ಗಿರುವುದನ್ನು ವಿಡಿಯೊದಲ್ಲಿ ಕಾಣಬಹುದಾಗಿದೆ. ಹತ್ತಾರು ಮಂದಿ ನೆಲಕ್ಕೆ ಉರುಳಿದ್ದು, ಚಕ್ರದ ಕೆಳಗೆ ಸಿಲುಕಿರುವುದು ವಿಡಿಯೊದಲ್ಲಿದೆ. ಅನಂತರ ಜನರು ಕಾರನ್ನು ಹಿಂಬಾಲಿಸಿ ಓಡುತ್ತಾರೆ.
ದುರಂತಕ್ಕೆ ಕಾರಣವಾದ ಮಧ್ಯ ಪ್ರದೇಶದ ಸಂಖ್ಯೆ ಒಳಗೊಂಡ ಮಹೀಂದ್ರಾ ಕ್ವಾಂಟೊಕಾರನ್ನು ಜನರು ತಡೆದಿದ್ದಾರೆ. ಜನರು ವಾಹನಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸುವ ಜೊತೆಗೆ ಚಾಲಕನನ್ನು ಹಿಡಿದು ಥಳಿಸಿದ್ದಾರೆ. ಕಾರಿನಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಂಗ್ರಹವಿತ್ತು ಎಂದು ಆರೋಪಿಸಿರುವುದಾಗಿ ವರದಿಯಾಗಿದೆ.
ಘಟನೆಯ ಸಂಬಂಧ ಮಧ್ಯ ಪ್ರದೇಶ ಮೂಲದ 21 ವರ್ಷ ವಯಸ್ಸಿನ ಬಬ್ಲು ವಿಶ್ವಕರ್ಮ ಮತ್ತು 26 ವರ್ಷದ ಶಿಶುಪಾಲ್ ಸಾಹು ಎಂಬುವವರನ್ನು ಬಂಧಿಸಲಾಗಿದೆ ಎಂದು ಜಶ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.