ಬಿಜಾಪುರ (ಛತ್ತೀಸಗಡ): ಮಾವೊ ಸಿದ್ಧಾಂತ ತ್ಯಜಿಸಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದ ತಮ್ಮ ಮಾಜಿ ಸಹಚರನನ್ನು ನಕ್ಸಲರು ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಛತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಸೋಮದು ರಾಮ್ ಪೊಯಮ್ ಅಲಿಯಾಸ್ ಮಲ್ಲೇಶ್ ಮೃತ ವ್ಯಕ್ತಿ. ಅವರು 2014ರಲ್ಲಿ ಮಾವೊ ಸಿದ್ಧಾಂತ ತ್ಯಜಿಸಿ, ಶರಣಾಗಿದ್ದರು. ಬಳಿಕ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ)ಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸಕ್ಕೆ ಸೇರಿದ್ದರು.
‘ಜಂಗ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕೊತ್ರಪಾಲ್ ಗ್ರಾಮದಲ್ಲಿರುವ ಸಂಬಂಧಿ ಮನೆಗೆ ಸೋಮದು ಗುರುವಾರ ಹೋಗಿದ್ದರು. ಅಂದು ಸಂಜೆ ಶಸ್ತ್ರಾಸ್ತ್ರ ಸಹಿತ ದಾಳಿ ಮಾಡಿದ ಬಂಡುಕೋರರು ಕೃತ್ಯ ಎಸಗಿದ್ದಾರೆ’ ಎಂದು ಪ್ರಾಥಮಿಕ ಮಾಹಿತಿಯನ್ನು ಆಧರಿಸಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸೋಮದು ಅವರ ಸಹೋದರ ಅದೇ ಪ್ರದೇಶದಲ್ಲಿ ನಕ್ಸಲರ ಕಮಾಂಡರ್ ಆಗಿದ್ದು, ಈ ಕೊಲೆಯಲ್ಲಿ ಆತನ ಪಾತ್ರವೂ ಇದೆ ಎಂದು ಪೊಲೀಸರು ಹೇಳಿದರು.
ಕೃತ್ಯದ ನಂತರ ನಕ್ಸಲರು ಸೋಮದು ಅವರ ದೇಹಕ್ಕೆ ಅವರ ಸಂಬಂಧಿಗಳ ಎದುರೇ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಕೃತ್ಯಕ್ಕೆ ಕಾರಣರಾದ ನಕ್ಸಲರ ಶೋಧಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.