ಬಿಜಾಪುರ: ಛತ್ತೀಸ್‌ಗಡದ ನಕ್ಸಲ್ ಪೀಡಿತ ಬಿಜಾಪುರ ಜಿಲ್ಲೆಯಲ್ಲಿನ ಎರಡು ಪ್ರತ್ಯೇಕ ಘಟನೆಗಳಲ್ಲಿ ನಕ್ಸಲರು 45 ವರ್ಷದ ಪೊಲೀಸ್ ಮಾಹಿತಿದಾರನನ್ನು ಕೊಂದಿದ್ದಾರೆ ಮತ್ತು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮೂರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಶುಕ್ರವಾರ ನಕ್ಸಲರು ಗೋಪ್ನಿಯಾ ಸೈನಿಕನನ್ನು (ಪೊಲೀಸ್ ರಹಸ್ಯ ಮಾಹಿತಿದಾರ) ಕೊಂದು ಶವವನ್ನು ಬಿಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗ್ಲೂರು ರಸ್ತೆಯಲ್ಲಿ ಎಸೆದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಪಂಕಜ್ ಶುಕ್ಲಾ ತಿಳಿಸಿದ್ದಾರೆ.
ಮೃತನನ್ನು ಅಂದೋ ರಾಮ್ ಎಂದು ಗುರುತಿಸಲಾಗಿದ್ದು, ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮತ್ತೋರ್ವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಶುಕ್ರವಾರ ಬಿಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚೆರ್ಕಂಟಿ ಪಟೇಲ್‌ಪರಾ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಮೂರು ವಾಹನಗಳಿಗೆ ನಕ್ಸಲರು ಬೆಂಕಿ ಹಚ್ಚಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್‌ವೈ) ಅಡಿಯಲ್ಲಿ ನಿರ್ಮಾಣ ಕಾರ್ಯದಲ್ಲಿ ಬಳಸುತ್ತಿದ್ದ ಟ್ರಕ್, ಜೆಸಿಬಿ ಯಂತ್ರ ಮತ್ತು ಮತ್ತೊಂದು ಭಾರಿ ವಾಹನಕ್ಕೆ ನಕ್ಸಲರು ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.