ADVERTISEMENT

ಫೋನ್‌ಗಾಗಿ 41 ಲಕ್ಷ ಲೀಟರ್‌ ನೀರು ಖಾಲಿ!

ನೀರಿಗೆ ಬಿದ್ದ ಮೊಬೈಲ್‌ ತೆಗೆಯುವ ಯತ್ನ: ಛತ್ತೀಸಗಢದ ಅಧಿಕಾರಿ ಅಮಾನತು

​ಪ್ರಜಾವಾಣಿ ವಾರ್ತೆ
Published 26 ಮೇ 2023, 23:46 IST
Last Updated 26 ಮೇ 2023, 23:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಂಕೆರ್‌: ಜಲಾಶಯದಲ್ಲಿ ಬಿದ್ದ ತನ್ನ ₹95 ಸಾವಿರ ಬೆಲೆಯ ಮೊಬೈಲ್‌ ಅನ್ನು ಪಡೆದುಕೊಳ್ಳುವುದಕ್ಕಾಗಿ ಆಹಾರ ನಿರೀಕ್ಷಕ ರಾಜೇಶ್‌ ವಿಶ್ವಾಸ್‌ ಎಂಬುವರು ಪರಲ್‌ಕೋಟ್‌ ಜಲಾಶಯದಿಂದ 41 ಲಕ್ಷ ಲೀಟರ್‌ ನೀರನ್ನು ಖಾಲಿ ಮಾಡಿಸಿದ್ದಾರೆ. 

ರಾಜೇಶ್‌ ಅವರು ಕಾಂಕೆರ್‌ ಜಿಲ್ಲೆಯ ಪಖಾಂಜುರ ಪ್ರದೇಶದಲ್ಲಿ ಆಹಾರ ನಿರೀಕ್ಷಕರಾಗಿದ್ದರು. 

‘ಜಲಾಶಯದಲ್ಲಿ ಸಂಗ್ರಹವಾಗಿದ್ದ ನೀರನ್ನು ಇಂಥ ಬಿರುಬೇಸಿಗೆಯ ಕಾಲದಲ್ಲಿ ಖಾಲಿ ಮಾಡಿಸಿದ್ದಕ್ಕಾಗಿ ರಾಜೇಶ್‌ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಇಲ್ಲಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಶುಕ್ಲಾ ಅವರು ಶುಕ್ರವಾರ ಹೊರಡಿಸಿದ ಆದೇಶದಲ್ಲಿ ಹೇಳಲಾಗಿದೆ.

ADVERTISEMENT

ಇದರೊಂದಿಗೆ, ಜಲಾಶಯದ ನೀರು ಖಾಲಿ ಮಾಡಲು ಮೌಖಿಕ ಒಪ್ಪಿಗೆ ನೀಡಿದ ಜಲ ಸಂಪನ್ಮೂಲ ಇಲಾಖೆಯ ಉಪವಿಭಾಗಾಧಿಕಾರಿ ಆರ್‌.ಸಿ. ದಿವರ್‌ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿದ್ದಾರೆ. ದಿವರ್‌ ಅವರ ವಿರುದ್ಧ ‌ಕ್ರಮ ತೆಗೆದುಕೊಳ್ಳುವಂತೆ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಏನಾಗಿತ್ತು?: ರಾಜೇಶ್‌ ಅವರು ತಮ್ಮ ಸ್ನೇಹಿತರೊಂದಿಗೆ ಕಳೆದ ಭಾನುವಾರ (ಮೇ 21) ಜಲಾಶಯಕ್ಕೆ‌ ತೆರಳಿದ್ದರು. ಈ ವೇ‌ಳೆ ಸ್ನೇಹಿತರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ರಾಜೇಶ್‌ ಮುಂದಾದರು. ಆಗ ಅವರ ಸ್ಯಾಮ್ಸಂಗ್‌ ಗ್ಯಾಲಕ್ಸಿ ಎಸ್‌23 ಮಾಡೆಲ್‌ ಫೋನು ಜಲಾಶಯಕ್ಕೆ ಬಿದ್ದಿತು.

‘ಈಜು ಗೊತ್ತಿದ್ದ ನನ್ನ ಸ್ನೇಹಿತರು ಹಾಗೂ ಕೆಲವು ಸ್ಥಳೀಯರು ಮೊಬೈಲ್‌ ಹುಡುಕಲು ಹಲವು ಬಾರಿ ಪ್ರಯತ್ನ ನಡೆಸಿದರು‌. ಆದರೂ, ಫೋನ್‌ ದೊರಕಲಿಲ್ಲ. ನಂತರ ‘ಜಲಾಶಯವು 10 ಅಡಿ ಇದೆ. ಒಂದು ವೇಳೆ 3–4 ಅಡಿಗಳಷ್ಟು ನೀರು ಖಾಲಿ ಮಾಡಿಸುವಂತಾದರೆ ಮೊಬೈಲ್‌ ಹುಡುಕಲು ಅನುಕೂಲವಾಗುತ್ತದೆ’ ಎಂದು ಸ್ಥಳೀಯರು ಹೇಳಿದರು. ಆದ್ದರಿಂದ ನಾನು ದಿವರ್‌ ಅವರ ಬಳಿ ಮಾತನಾಡಿದೆ. ಅವರು ಮೌಖಿಕ ಆದೇಶ ನೀಡಿದರು’ ಎಂದು ರಾಜೇಶ್‌ ಅವರು ಪಿಟಿಐಗೆ ಹೇಳಿದ್ದಾರೆ.

ಜಲಾಶಯದ ನೀರನ್ನು ಖಾಲಿ ಮಾಡಿಸಲು 30 ಎಚ್‌ಪಿ ಡೀಸೆಲ್‌ ಪಂಪುಗಳನ್ನು ರಾಜೇಶ್‌ ಅವರು ತರಿಸಿದರು. ಇಷ್ಟು ದೊಡ್ಡ ಪ್ರಮಾಣದ ನೀರನ್ನು ಖಾಲಿ ಮಾಡಿಸುವುದಕ್ಕಾಗಿ ಸೋಮವಾರ ಸಂಜೆಯಿಂದ ಗುರುವಾರದ ವರೆಗೂ ಪಂಪ್‌ಗಳನ್ನು ಚಾಲನೆ ಮಾಡಿಸಿ ತಮ್ಮ ಸ್ವಂತ ಹಣದಲ್ಲಿ ನೀರು ಖಾಲಿ ಮಾಡಿಸಿದ್ದಾರೆ. ನಂತರ ಅವರ ಫೋನ್‌ ಸಿಕ್ಕಿದೆ. ಫೋನ್‌ ಸಿಕ್ಕಿತಾದರೂ ಅದು ಕಾರ್ಯನಿರ್ವಹಿಸುತ್ತಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ನೀರನ್ನು ಯಾರೂ ಬಳಸುತ್ತಿರಲಿಲ್ಲ. ಖಾಲಿ ಮಾಡಿದ ನೀರು ಅಕ್ಕಪಕ್ಕದ ಕೆರೆಗಳಿಗೆ ಹರಿದು ಹೋಗಿದೆ. ನೀರು ವ್ಯರ್ಥವಾಗಿಲ್ಲ

-ರಾಜೇಶ್‌ ವಿಶ್ವಾಸ್‌, ಅಮಾನತುಗೊಂಡ ಆಹಾರ ನಿರೀಕ್ಷಕ

ಕುಡಿಯುವ ನೀರಿನ ಸಮಸ್ಯೆಗೆ ಸರ್ಕಾರ ವ್ಯವಸ್ಥೆ ಮಾಡಿಲ್ಲ. ಇಂಥ ಸಂದರ್ಭದಲ್ಲಿ ಫೋನ್‌ಗಾಗಿ 1500 ಎಕರೆಯಷ್ಟು ಭೂಮಿಗೆ ಉಪಯೋಗವಾಗಬಹುದಾಗಿದ್ದ ನೀರನ್ನು ಅಧಿಕಾರಿ ಖಾಲಿ ಮಾಡಿಸಿದ್ದಾರೆ

-ರಮಣ್‌ ಸಿಂಗ್‌, ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.