ಕೊರ್ಬಾ: ಛತ್ತೀಸಗಢ ಕೊರ್ಬಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯ ವಾಹನದಲ್ಲಿ ಸುಮಾರು ₹11.50 ಲಕ್ಷ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಛತ್ತೀಸಗಢ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಮುನ್ನಾ ದಿನವಾದ ಇಂದು (ಗುರುವಾರ) ಈ ಘಟನೆ ನಡೆದಿದೆ. ಹಣವನ್ನು ವಶಪಡಿಸಿಕೊಂಡ ಸಂದರ್ಭದಲ್ಲಿ ಕೊರ್ಬಾ ಜಿಲ್ಲೆಯ ಪಾಲಿ–ತನಾಖರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಮಾಜಿ ಶಾಸಕ ರಾಮ್ ದಯಾಳ್ ಉಯಿಕೆ ಅವರು ವಾಹನದಲ್ಲಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
‘ಕೆಲವು ಸ್ಥಳೀಯ ಗ್ರಾಮಸ್ಥರು ಪಸನ್ ಪೊಲೀಸ್ ಠಾಣೆ ವ್ಯಾಪ್ತಿಯ ಜುಂಕಿಡಿ ಗ್ರಾಮದ ಬಳಿ ಉಯಿಕೆ ಅವರು ತೆರಳುತ್ತಿದ್ದ ವಾಹನವನ್ನು ಅಡ್ಡಗಟ್ಟಿ, ಪೊಲೀಸರಿಗೆ ಮಾಹಿತಿ ನೀಡಿದರು’ ಎಂದು ಕೊರ್ಬಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.
ವಾಹನ ತಪಾಸಣೆಯ ವೇಳೆ ಹಣಕ್ಕೆ ಪೂರಕ ದಾಖಲೆಗಳನ್ನು ಒದಗಿಸಲು ರಾಮ್ ದಯಾಳ್ ವಿಫಲರಾದ ಕಾರಣ, ಸುಮಾರು ₹11.50 ಲಕ್ಷ ಹಣ ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶುಕ್ಲಾ ಹೇಳಿದ್ದಾರೆ.
ಛತ್ತೀಸಗಢ ವಿಧಾನಸಭೆ ಚುನಾವಣೆಗೆ ಎರಡನೇ ಹಂತದಲ್ಲಿ 70 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆಯಲಿದೆ. ರಾಜ್ಯದ ಒಟ್ಟು 90 ಸ್ಥಾನಗಳ ಪೈಕಿ 20 ಸ್ಥಾನಗಳಿಗೆ ನವೆಂಬರ್ 7 ರಂದು ಮತದಾನ ನಡೆಯಿತು.
ರಾಜ್ಯದಲ್ಲಿ ಅಕ್ಟೋಬರ್ 9 ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಬುಧವಾರದವರೆಗೆ ದಾಖಲೆ ಇಲ್ಲದ ಸುಮಾರು ₹73.90 ಕೋಟಿ ಮೌಲ್ಯದ ಅಕ್ರಮ ಮದ್ಯ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ₹20.15 ಕೋಟಿ ನಗದು ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.