ADVERTISEMENT

ಛತ್ತೀಸಗಢ: ವಿಷ್ಣುದೇವ್‌ ಸಾಯ್‌ ನೂತನ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2023, 16:34 IST
Last Updated 10 ಡಿಸೆಂಬರ್ 2023, 16:34 IST
ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆಗಿ ಆಯ್ಕೆಯಾದ ವಿಷ್ಣುದೇವ್ ಸಾಯ್ ಅವರಿಗೆ ಬಿಜೆಪಿ ಮುಖಂಡರಾದ ಸರ್ವಾನಂದ ಸೊನೊವಾಲ್ ಮತ್ತು ದುಷ್ಯಂತ್ ಕುಮಾರ್ ಗೌತಮ್ ಅವರು ಹೂವಿನ ಹಾರ ಹಾಕಿ ಅಭಿನಂದಿಸಿದರು –ಪಿಟಿಐ ಚಿತ್ರ
ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆಗಿ ಆಯ್ಕೆಯಾದ ವಿಷ್ಣುದೇವ್ ಸಾಯ್ ಅವರಿಗೆ ಬಿಜೆಪಿ ಮುಖಂಡರಾದ ಸರ್ವಾನಂದ ಸೊನೊವಾಲ್ ಮತ್ತು ದುಷ್ಯಂತ್ ಕುಮಾರ್ ಗೌತಮ್ ಅವರು ಹೂವಿನ ಹಾರ ಹಾಕಿ ಅಭಿನಂದಿಸಿದರು –ಪಿಟಿಐ ಚಿತ್ರ   

ಭೋಪಾಲ್: ಛತ್ತೀಸಗಢದ ನೂತನ ಮುಖ್ಯಮಂತ್ರಿಯಾಗಿ ಬುಡಕಟ್ಟು ಸಮುದಾಯದ ಪ್ರಭಾವಿ ನಾಯಕ, ಕೇಂದ್ರದ ಮಾಜಿ ಸಚಿವ ವಿಷ್ಣುದೇವ್ ಸಾಯ್ ಅವರು ಆಯ್ಕೆಯಾಗಿದ್ದಾರೆ. ವರಿಷ್ಠರು ನೇಮಕ ಮಾಡಿದ ವೀಕ್ಷಕರ ಸಮ್ಮುಖದಲ್ಲಿ ರಾಯಪುರದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಭಾನುವಾರ ನಡೆಯಿತು. ಈ ಸಭೆಯ ನಂತರ ಸಾಯ್ ಹೆಸರನ್ನು ಪ್ರಕಟಿಸಲಾಯಿತು.

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಆಗುತ್ತಿದ್ದಂತೆಯೇ ಸಾಯ್ ಅವರು ರಾಜಭವನಕ್ಕೆ ತೆರಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ಸರ್ಕಾರ ರಚಿಸುವಂತೆ ರಾಜ್ಯಪಾಲರು ಸಾಯ್ ಅವರಿಗೆ ಆಹ್ವಾನ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸಮಯ ಲಭ್ಯತೆ ಆಧರಿಸಿ, ಮಂಗಳವಾರ ಅಥವಾ ಬುಧವಾರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸಾಯ್ ಅವರು ಕುಂಕುರಿ ಮೀಸಲು ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾಗಿದ್ದಾರೆ. ಅಲ್ಲಿ ಅವರು ಕಾಂಗ್ರೆಸ್ಸಿನ ಯು.ಡಿ. ಮಿಂಜ್ ಅವರನ್ನು 25 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ. ಬುಡಕಟ್ಟು ಸಮುದಾಯದವರು ಹೆಚ್ಚಿರುವ ಸರಗುಜಾ ಪ್ರದೇಶದಲ್ಲಿ ಬಿಜೆಪಿ ಅಷ್ಟೂ ಸ್ಥಾನಗಳನ್ನು (14) ಗೆದ್ದಿರುವ ಕಾರಣ, ಸಾಯ್ ಅವರ ಹೆಸರು ಮುಖ್ಯಮಂತ್ರಿ ಹುದ್ದೆಗೆ ಪ್ರಬಲವಾಗಿ ಕೇಳಿಬಂದಿತ್ತು. ಅಲ್ಲದೆ, ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರುಣ್ ಸಾವ್, ರೇಣುಕಾ ಸಿಂಗ್ ಅವರ ಹೆಸರುಗಳೂ ಈ ಸ್ಥಾನಕ್ಕೆ ಚಾಲ್ತಿಯಲ್ಲಿದ್ದವು.

ADVERTISEMENT

ಆದರೆ, ಬಿಜೆಪಿ ವೀಕ್ಷಕರು ಶಾಸಕರ ಅಭಿಪ್ರಾಯ ಆಲಿಸಿ ಸಾಯ್ ಅವರ ಹೆಸರನ್ನು ಒಕ್ಕೊರಲಿನಿಂದ ಪ್ರಕಟಿಸಿದರು. ಬುಡಕಟ್ಟು ಸಮುದಾಯಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸರಗುಜಾ ಮಾತ್ರವೇ ಅಲ್ಲದೆ, ಬಸ್ತಾರ್ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಪಡೆದಿರುವುದು ಸಾಯ್ ಅವರ ಆಯ್ಕೆಯಲ್ಲಿ ಕೆಲಸ ಮಾಡಿವೆ ಎಂದು ಮೂಲಗಳು ಹೇಳಿವೆ.

ಬಸ್ತಾರ್ ಪ್ರದೇಶದ 12 ಕ್ಷೇತ್ರಗಳ ಪೈಕಿ ಎಂಟು ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. 2018ರಲ್ಲಿ ಈ ಪ್ರದೇಶದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿತ್ತು. ನಂತರ ಅಲ್ಲಿ ಬಿಜೆಪಿ ನಾಯಕರು ಮತ್ತು ಆರ್‌ಎಸ್‌ಎಸ್‌ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಿದ್ದರು. ಮತಾಂತರದ ವಿಷಯವನ್ನು ಅಲ್ಲಿ ಮತ್ತೆ ಮತ್ತೆ ಪ್ರಸ್ತಾಪಿಸಿದ್ದರು.

ಬುಡಕಟ್ಟು ಸಮುದಾಯಗಳ ಪರವಾಗಿ ತಾನು ಇದ್ದೇನೆ ಎಂಬ ಸಂದೇಶವನ್ನು ರವಾನಿಸುವ ಉದ್ದೇಶದಿಂದ ಬಿಜೆಪಿಯು ಸಾಯ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರುತ್ತಿದೆ ಎನ್ನಲಾಗಿದೆ. ‘ನಮ್ಮ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು’ ಎಂದು ಸಾಯ್ ಅವರು ತಮ್ಮ ಹೆಸರು ಮುಖ್ಯಮಂತ್ರಿ ಸ್ಥಾನಕ್ಕೆ ಅಂತಿಮಗೊಂಡ ನಂತರ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.

90 ಸದಸ್ಯ ಬಲದ ಛತ್ತೀಸಗಢ ವಿಧಾನಸಭೆಯಲ್ಲಿ ಬಿಜೆಪಿಯು 54 ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ 35 ಸ್ಥಾನ ಪಡೆದಿದೆ.

ವಿಷ್ಣುದೇವ್ ಸಾಯ್

ಕುತೂಹಲಕ್ಕೆ ಇಂದು ತೆರೆ? : ಮಧ್ಯಪ್ರದೇಶದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಸೋಮವಾರ ನಡೆಯಲಿದ್ದು ಮುಂದಿನ ಮುಖ್ಯಮಂತ್ರಿ ಯಾರಾಗುವರು ಎಂಬ ಕುತೂಹಲಕ್ಕೆ ತೆರೆಬೀಳಬಹುದು ಎಂದು ನಿರೀಕ್ಷಿಸಲಾಗಿದೆ. ‘ನಮ್ಮನ್ನು ಮಧ್ಯಾಹ್ನ 1 ಗಂಟೆಗೆ ಊಟಕ್ಕೆ ಆಹ್ವಾನಿಸಲಾಗಿದೆ. ಶಾಸಕಾಂಗ ಪಕ್ಷದ ಸಭೆ ಸಂಜೆ 4ಕ್ಕೆ ಆರಂಭವಾಗಲಿದ್ದು ಸಂಜೆ 7ರ ವೇಳೆಗೆ ನೂತನ ಮುಖ್ಯಮಂತ್ರಿಯ ಹೆಸರು ಪ್ರಕಟಗೊಳ್ಳುವ ಸಾಧ್ಯತೆಯಿದೆ’ ಎಂದು ಶಾಸಕರೊಬ್ಬರು ಹೇಳಿದರು. ಕೇಂದ್ರದ ಮೂವರು ವೀಕ್ಷಕರಾದ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರ ಅವರು ಸೋಮವಾರ ಬೆಳಿಗ್ಗೆ 11ರ ವೇಳೆಗೆ ಭೋಪಾಲ್‌ ತಲುಪುವರು ಎಂದರು. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 230 ಸ್ಥಾನಗಳ ಪೈಕಿ 163ರಲ್ಲಿ ಗೆದ್ದಿದೆ. ಶಿವರಾಜ್ ಸಿಂಗ್‌ ಚೌಹಾಣ್ ಪ್ರಹ್ಲಾದ್‌ ಪಟೇಲ್ ನರೇಂದ್ರ ತೋಮರ್‌ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಮಧ್ಯಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ. ಶರ್ಮ ಅಲ್ಲದೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಸಿ.ಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ವಸುಂಧರಾ ಭೇಟಿಯಾದ ಶಾಸಕರು : ರಾಜಸ್ಥಾನದ ಮುಂದಿನ ಮುಖ್ಯಮಂತ್ರಿ ಯಾರಾಗುವರು ಎಂಬ ಕುತೂಹಲ ಮುಂದುವರಿದಿದೆ. ಈ ನಡುವೆ ಬಿಜೆಪಿಯ ಕೆಲವು ಶಾಸಕರು ಪಕ್ಷದ ಪ್ರಭಾವಿ ನಾಯಕಿ ವಸುಂಧರಾ ರಾಜೇ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಬಿಜೆಪಿ ವರಿಷ್ಠರು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಮೂವರು ವೀಕ್ಷಕರನ್ನು ನೇಮಿಸಿದ್ದರೂ ಸಭೆಯ ದಿನಾಂಕವನ್ನು ಪ್ರಕಟಿಸಿಲ್ಲ. ಅಜಯ್‌ ಸಿಂಗ್‌ ಮತ್ತು ಬಾಬು ಸಿಂಗ್‌ ಒಳಗೊಂಡಂತೆ ಸುಮಾರು 10 ಶಾಸಕರು ರಾಜೇ ಅವರನ್ನು ಸಿವಿಲ್‌ ಲೈನ್ಸ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿದ್ದಾರೆ ಎಂದು ಮೂಲಗಳು ಹೇಳಿವೆ. ಚುನಾವಣೆ ಫಲಿತಾಂಶ ಹೊರಬಿದ್ದ (ಡಿ.3) ಬಳಿಕದ ಎರಡು ದಿನಗಳಲ್ಲಿ 50 ಶಾಸಕರು ರಾಜೇ ಅವರನ್ನು ಭೇಟಿಯಾಗಿದ್ದರು. ‘ಬಲ ಪ್ರದರ್ಶನ’ದ ಮೂಲಕ ತಾವೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂಬುದನ್ನು ತೋರಿಸಿಕೊಡಲು ಅವರು ಶಾಸಕರ ಸಭೆ ನಡೆಸಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ರಾಜಸ್ಥಾನ ವಿಧಾನಸಭೆಯ 199 ಸ್ಥಾನಗಳ ಪೈಕಿ 115ರಲ್ಲಿ ಗೆದ್ದಿರುವ ಬಿಜೆಪಿ ಸರ್ಕಾರ ರಚಿಸಲು ಸಜ್ಜಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.