ಬಿಲಾಸಪುರ: 'ಬಹುತೇಕ ಹೆಣ್ಣುಮಕ್ಕಳು ಬ್ರೇಕಪ್ (ಪ್ರತ್ಯೇಕಗೊಂಡ) ನಂತರ ಅತ್ಯಾಚಾರ ಪ್ರಕರಣ ದಾಖಲಿಸುತ್ತಾರೆ' ಎಂದು ಛತ್ತೀಸಗಡದ ಮಹಿಳಾ ಆಯೋಗದ ಅಧ್ಯಕ್ಷೆ ಕಿರಣ್ಮಯಿ ನಾಯಕ್ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಕಿರಣ್ಮಯಿ ನಾಯಕ್ 'ವಿವಾಹಿತ ಪುರುಷನೊಬ್ಬ ಹುಡುಗಿಯೊಬ್ಬಳನ್ನು ಸಂಬಂಧಕ್ಕಾಗಿ ಸೆಳೆಯುತ್ತಿದ್ದಾನೆ ಎಂದಾಗ, ಆ ವ್ಯಕ್ತಿ ಆಕೆಗೆ ಸುಳ್ಳು ಹೇಳುತ್ತಿದ್ದಾನೆಯೇ ಅಥವಾ ಅವಳನ್ನು ಬದುಕಲು ಬಿಡುತ್ತಾನೆಯೇ ಎಂಬುದರ ಬಗ್ಗೆ ಹುಡುಗಿ ಅರ್ಥ ಮಾಡಿಕೊಳ್ಳಬೇಕು. ಅದು ಹಾಗಲ್ಲದಿದ್ದರೆ, ಪೊಲೀಸರನ್ನು ಸಂಪರ್ಕಿಸಬೇಕು. ಅದರೆ, ಹೆಚ್ಚಿನ ಸಂದರ್ಭಗಳಲ್ಲಿ, ಹುಡುಗಿಯರು ಸಹಮತದ ಸಂಬಂಧವನ್ನು ಹೊಂದಿರುತ್ತಾರೆ. ಲಿವ್ ಇನ್ (ಸಹ ಜೀವನ) ನಡೆಸುತ್ತಿರುತ್ತಾರೆ. ಒಂದೊಮ್ಮೆ ಪ್ರತ್ಯೇಕತೆಗೊಳ್ಳುತ್ತಲೇ ಅವರು ಅತ್ಯಾಚಾರ ಪ್ರಕರಣ ದಾಖಲಿಸುತ್ತಾರೆ,' ಎಂದು ಹೇಳಿದರು.
'ಲಿವ್-ಇನ್'ನಂಥ ಸಂಬಂಧಗಳು ಎಂದಿಗೂ ಅಪಾಯಕಾರಿ ಎಂದು ಅವರು ವಿವರಿಸಿದರು.
'ನನ್ನ ಮನವಿಯೆಂದರೆ, ನೀವು ಅಪ್ರಾಪ್ತ ವಯಸ್ಸಿನವರಾಗಿದ್ದರೆ 'ಫಿಲ್ಮ್ ರೋಮ್ಯಾನ್ಸ್'ಗೆ ಮರುಳಾಗಬೇಡಿ. ನಿಮ್ಮ ಕುಟುಂಬ, ಸ್ನೇಹಿತರು ಮತ್ತು ನಿಮ್ಮ ಇಡೀ ಜೀವನವು ನಾಶವಾಗಿ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು 18ನೇ ವಯಸ್ಸಿಗೆ ಮದುವೆಯಾಗುವ ಪ್ರವೃತ್ತಿ ಹೊಂದಿದ್ದಾರೆ. ಕೆಲವು ವರ್ಷಗಳ ನಂತರ, ಮಕ್ಕಳೆಲ್ಲ ಆದ ನಂತರ ಇಬ್ಬರಿಗೂ ಬದುಕು ಕಷ್ಟಕರವಾಗಿರುತ್ತದೆ,' ಎಂದು ಅವರು ಹೇಳಿದರು.
ಪ್ರತಿಯೊಂದು ಪ್ರೇಮಕತೆಯೂ, ಸಿನಿಮಾ ರೀತಿಯ ಪ್ರೇಮಕತೆ ಆಗಿರಲು ಸಾಧ್ಯವಿಲ್ಲ. ವಾಸ್ತವವನ್ನು ಅರಿತುಕೊಳ್ಳಿ ಎಂದು ಅವರು ಸಲಹೆ ನೀಡಿದ್ದಾರೆ.
'ನಮ್ಮ ಸಮಾಜ ಎಷ್ಟೇ ಹೈಟೆಕ್ ಆದರೂ, ಮಹಿಳೆಯರ ಶಿಕ್ಷಣದ ಮಟ್ಟ ಉತ್ತಮವಾಗಿದ್ದರೂ ಇಂದಿಗೂ ಅವರ ಮೇಲಿನ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ' ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.