ನವದೆಹಲಿ(ಪಿಟಿಐ): ಐಎನ್‌ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಪ್ರಮುಖ ಸಾಕ್ಷಿಗಳ ಮೇಲೆ ಒತ್ತಡ ಹೇರಲು ಅಥವಾ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆ ಎಂದು ಬುಧವಾರ ಸಿಬಿಐ, ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
‘ತಮ್ಮನ್ನು ಅವಮಾನಿಸುವುದಕ್ಕಾಗಿಯೇ ಸಿಬಿಐ ಜೈಲಿನಲ್ಲಿ ಇರಿಸುತ್ತಿದೆ. ಆದ್ದರಿಂದ ತಮಗೆ ಜಾಮೀನು ನೀಡಬೇಕು’ ಎಂಬುದಾಗಿ ನ್ಯಾಯಮೂರ್ತಿ ಆರ್. ಭಾನುಮತಿ ನೇತೃತ್ವದ ಪೀಠದ ಮುಂದೆ ಚಿದಂಬರಂ ಮಾಡಿರುವ ಮನವಿಗೆ ಸಿಬಿಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸಾಕ್ಷಿಗಳ ಮೇಲೆ ಒತ್ತಡ ಹೇರಲು ಪ್ರಯತ್ನಿಸಿರುವ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಿದೆ ಎಂದು ಸಿಬಿಐ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ. ಎಂ. ನಟರಾಜ್ ಹೇಳಿದರು.
ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಎ.ಎಂ. ಸಿಂಘ್ವಿ ಅವರು, ಚಿದಂಬರಂ ಪರ ಮಂಗಳವಾರ ವಾದ ಮಂಡಿಸಿದ್ದರು.
ಬಂಧಿಸಿದ ಇ.ಡಿ
ಎಂಟು ವಾರಗಳಿಂದ ತಿಹಾರ್ ಜೈಲಿನಲ್ಲಿರುವ ಚಿದಂಬರಂ ಅವರನ್ನು ಹಣ ಅಕ್ರಮ ವರ್ಗಾ
ವಣೆ ಪ್ರಕರಣಕ್ಕೆ ಸಂಬಂಧಿಸಿ
ದಂತೆ ಬುಧವಾರ ಜಾರಿ ನಿರ್ದೇಶನಾಲಯ ಬಂಧಿಸಿದೆ.
ಅವರನ್ನು ವಿಚಾರಣೆಗಾಗಿ 14 ದಿನಗಳ ಕಾಲ ಇ.ಡಿ ವಶಕ್ಕೆ ನೀಡಬೇಕು ಎಂದು ವಿಶೇಷ ನ್ಯಾಯಮೂರ್ತಿ ಅಜಯ್‌ಕುಮಾರ್ ಕುಹರ್ ಅವರಿಗೆ ಮನವಿ ಮಾಡಲಾಗಿದೆ. ಆದರೆ ಸಿಬಿಐ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಚಿದಂಬರಂ ನ್ಯಾಯಾಂಗ ಬಂಧನ ಅವಧಿ ಗುರುವಾರ ಮುಕ್ತಾಯವಾಗಲಿದ್ದು, ಇ.ಡಿ. ಸಲ್ಲಿಸಿದ ಅರ್ಜಿ ವಿಚಾರಣೆ ಗುರುವಾರ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.