ADVERTISEMENT

ಸಿಬಿಐ ಸುಪರ್ದಿಗೆ ಚಿದಂಬರಂ

26ರವರೆಗೆ ಕಸ್ಟಡಿಗೆ ಒಪ್ಪಿಸಿ ದೆಹಲಿಯ ನ್ಯಾಯಾಲಯದ ಆದೇಶ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:15 IST
Last Updated 22 ಆಗಸ್ಟ್ 2019, 20:15 IST
ನ್ಯಾಯಾಲಯವು ಕಸ್ಟಡಿಗೆ ಒಪ್ಪಿಸಿದ ಬಳಿಕ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಕರೆದೊಯ್ದರು
ನ್ಯಾಯಾಲಯವು ಕಸ್ಟಡಿಗೆ ಒಪ್ಪಿಸಿದ ಬಳಿಕ ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಕರೆದೊಯ್ದರು   

ನವದೆಹಲಿ: ಬುಧವಾರ ಸಿಬಿಐನಿಂದ ಬಂಧನಕ್ಕೆ ಒಳಗಾದ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಗುರುವಾರ ಮತ್ತಷ್ಟು ಹಿನ್ನಡೆ ಆಗಿದೆ. ಇದೇ 26ರವರೆಗೆ ಅವರನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಿ ದೆಹಲಿಯ ನ್ಯಾಯಾಲಯ ಆದೇಶ ನೀಡಿದೆ.

ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಅವರ ವಿರುದ್ಧ ಇರುವ ಆರೋಪ ‘ಗಂಭೀರ’ವಾಗಿದ್ದು ವಿವರವಾದ ತನಿಖೆ ನಡೆಯಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

‘ಆರೋಪಿಗೆ ನೀಡಿದ ಮೊತ್ತದ ಬಗೆಗಿನ ಆರೋಪವು ನಿರ್ದಿಷ್ಟವಾಗಿದೆ ಮತ್ತು ಸ್ಪಷ್ಟವಾಗಿದೆ. ಒಂದು ವೇಳೆ ಹಾಗೆ ಹಣ ಪಾವತಿ ಆಗಿದ್ದಿದ್ದರೆ ಅದು ಸಂದಾಯವಾದ ಮಾರ್ಗವನ್ನು ಪತ್ತೆ ಮಾಡಬೇಕಿದೆ’ ಎಂದು ವಿಶೇಷ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌ ಹೇಳಿದ್ದಾರೆ.

ADVERTISEMENT

ಸಿಬಿಐ ಪರವಾಗಿಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು. ಚಿದಂಬರಂ ಅವರು ತನಿಖೆಗೆ ಸಹಕರಿಸಿಲ್ಲ ಮತ್ತು ಹಾರಿಕೆಯ ಉತ್ತರ ನೀಡಿದ್ದಾರೆ. ಹಾಗಾಗಿ ಐದು ದಿನ ಅವರನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಬೇಕು ಎಂದು ಕೋರಿದರು.

ನಾಲ್ಕು ತಾಸಿಗೂ ಹೆಚ್ಚು ಹೊತ್ತು ವಾದ–ಪ್ರತಿವಾದದ ಬಳಿಕ ನ್ಯಾಯಾಧೀಶರು ಆದೇಶ ನೀಡಿದರು. 2018ರ ಜೂನ್‌ 6ರಿಂದ ಒಂದು ಬಾರಿಯೂ ತನಿಖಾ ಸಂಸ್ಥೆಯು ತಮ್ಮನ್ನು ವಿಚಾರಣೆಗೆ ಕರೆದಿಲ್ಲ, ಹಾಗಾಗಿ ಕಸ್ಟಡಿಗೆ ಕೊಡಬಾರದು ಎಂಬ ಚಿದಂಬರಂ ವಾದವನ್ನು ಒಪ್ಪಲಾಗದು ಎಂದು ಅವರು ಹೇಳಿದರು.

ಪ್ರತಿ 48 ತಾಸಿಗೊಮ್ಮೆ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಪ್ರತಿದಿನ ಅರ್ಧ ಗಂಟೆ ಅವರ ವಕೀಲರು ಮತ್ತು ಕುಟುಂಬದ ಸದಸ್ಯರ ಜತೆಗೆ ಮಾತನಾಡಲು ಅವಕಾಶ ಕೊಡಬೇಕು. ಅವರ ವೈಯಕ್ತಿಕ ಘನತೆಗೆ ಧಕ್ಕೆಯಾಗುವ ರೀತಿ ವರ್ತಿಸಬಾರದು ಎಂದು ಸಿಬಿಐಗೆ ಸೂಚಿಸಲಾಗಿದೆ. ಚಿದಂಬರಂ ಪರವಾಗಿ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ಅಭಿಷೇಕ್‌ ಮನು ಸಿಂಘ್ವಿ ಹಾಜರಾಗಿದ್ದರು.

ಆರೋಪಿ ಪರ ವಕೀಲರ ವಾದ
ಪೊಲೀಸ್‌ ಕಸ್ಟಡಿಗೆ ನೀಡುವುದು ನಿಯಮ ಅಲ್ಲ, ಬದಲಿಗೆ ನಿಯಮಕ್ಕೆ ಅದೊಂದು ಅಪವಾದ. ಸಿಬಿಐ ಕೇಳಿದ್ದ ಎಲ್ಲ ಪ್ರಶ್ನೆಗಳಿಗೂ ಅವರು ಉತ್ತರಿಸಿದ್ದಾರೆ. ಚಿದಂಬರಂ ವಿರುದ್ಧ ಸಾಕ್ಷ್ಯ ಹೇಳಿರುವ ಇಂದ್ರಾಣಿ ಮುಖರ್ಜಿ ಅವರ ವಿರುದ್ಧವೇ ಆರೋಪಗಳಿವೆ. ಹಾಗಾಗಿ, ಅವರ ಸಾಕ್ಷ್ಯವನ್ನು ಪರಿಗಣಿಸಲಾಗದು. ಈ ಪ್ರಕರಣದ ಎಲ್ಲ ಆರೋಪಿಗಳೂ ಜಾಮೀನು ಪಡೆದಿದ್ದಾರೆ. ಐಎನ್‌ಎಕ್ಸ್‌ ಸಂಸ್ಥೆಯು ವಿದೇಶಿ ಹೂಡಿಕೆ ಪಡೆದುಕೊಳ್ಳುವ ಪ್ರಸ್ತಾವಕ್ಕೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ ನೀಡಿದ ಒಪ್ಪಿಗೆಯನ್ನು ಅನುಮೋದಿಸುವ ಕೆಲಸವನ್ನಷ್ಟೇ ಚಿದಂಬರಂ ಮಾಡಿದ್ದಾರೆ. ಒಪ್ಪಿಗೆ ನೀಡಿದ ಪ್ರಕ್ರಿಯೆಯಲ್ಲಿ ಆರು ಕಾರ್ಯದರ್ಶಿಗಳು ಭಾಗಿಯಾಗಿದ್ದಾರೆ. ಅವರಲ್ಲಿ ಯಾರನ್ನೂ ತನಿಖೆಗೆ ಒಳಪಡಿಸಿಲ್ಲ.

ವಾದ ಮಂಡನೆ
ವಾದ ಮಂಡನೆಗೆ ಅವಕಾಶ ಕೊಡಬೇಕು ಎಂಬ ಚಿದಂಬರಂ ಅವರ ಕೋರಿಕೆಗೆ ನ್ಯಾಯಾಲಯ ಮನ್ನಣೆ ನೀಡಿತು. ತಮ್ಮ ವಿರುದ್ಧದ ಆರೋಪಗಳನ್ನು ಅವರು ಅಲ್ಲಗಳೆದರು. ತಮ್ಮನ್ನು ಸಿಬಿಐ ಹಿಂದೆ ತನಿಖೆಗೆ ಒಳಪಡಿಸಿದ ವಿಚಾರವನ್ನು ಪ್ರಸ್ತಾಪಿಸಿದರು. ಆ ಸಂದರ್ಭದಲ್ಲಿ ತಮ್ಮ ಹೆಸರಿನಲ್ಲಿರುವ ವಿದೇಶಿ ಬ್ಯಾಂಕ್‌ ಖಾತೆಗಳ ವಿವರ ಕೇಳಿದ್ದರು. ಆದರೆ, ಅಂತಹ ಖಾತೆ ಇಲ್ಲ ಎಂದು ಹೇಳಿದ್ದೆ ಎಂದರು.

*
ಇದು ಬುದ್ಧಿವಂತ ಜನರ ಜತೆಗಿನ ವ್ಯವಹಾರ. ಹಾಗಾಗಿ, ಪ್ರಕರಣದ ಬುಡ ತಲುಪಲು ಸಾಧ್ಯವಾಗದಿದ್ದರೆ ದೇಶಕ್ಕೆ ಸಲ್ಲಿಸಬೇಕಾದ ಕರ್ತವ್ಯದಲ್ಲಿ ನಾವು ವಿಫಲರಾದಂತೆ.
-ತುಷಾರ್‌ ಮೆಹ್ತಾ, ಸಾಲಿಸಿಟರ್‌ ಜನರಲ್‌

*
ತನಿಖೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕಿದೆ. ಅದಕ್ಕಾಗಿ ಕಸ್ಟಡಿ ತನಿಖೆ ಉಪಯುಕ್ತ ಮತ್ತು ಫಲಪ್ರದವಾಗಬಹುದು
-ಅಜಯ್‌ ಕುಮಾರ್‌ ಕುಹರ್‌, ವಿಶೇಷ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.