ನವದೆಹಲಿ: ನೆಹರೂ–ಗಾಂಧಿ ಕುಟುಂಬ ಹೊರತುಪಡಿಸಿ 15 ಜನರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು ಎಂದು ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಶನಿವಾರ ಪ್ರಧಾನಿ ನರೇಂದ್ರ ಮೋದಿಗೆ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ನರೆಂದ್ರ ಮೋದಿ, ನೆಹರೂ–ಗಾಂಧಿ ಕುಟುಂಬವನ್ನು ಹೊರುಪಡಿಸಿ ಕಾಂಗ್ರೆಸಿಗರೊಬ್ಬರನ್ನು ಐದು ವರ್ಷಗಳವರೆಗೆ ಪಕ್ಷದ ಅಧ್ಯಕ್ಷರನ್ನಾಗಿ ಮಾಡಲಿ ಎಂದು ಸವಾಲು ಹಾಕಿದ್ದರು. ಇದಕ್ಕೆ ತಿರುಗೇಟು ನೀಡಿರುವ ಪಿ.ಚಿದಂಬರಂ ನೆಹರೂ–ಗಾಂಧಿ ಕುಟುಂಬ ಹೊರುತುಪಡಿಸಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ 15 ಜನರ ಪಟ್ಟಿಯನ್ನು ನೀಡಿದ್ದಾರೆ.
ಆಚಾರ್ಯ ಕೃಪಲಾನಿ, ಪಟ್ಟಾಭಿ ಸೀತಾರಾಮಯ್ಯ, ಪುಷೋತ್ತಮದಾಸ್ ಟಂಡನ್, ಯು.ಎನ್. ದೇವೂರಾ, ಸಂಜೀವ ರೆಡ್ಡಿ, ಸಂಜೀವಯ್ಯ, ಕಾಮರಾಜ್, ನಿಜಲಿಂಗಪ್ಪ, ಸಿ.ಸುಬ್ರಮಣಿಯನ್, ಜಗಜೀವನ್ ರಾಂ, ಶಂಕರ ದಯಾಳ ಶರ್ಮಾ, ಡಿ.ಕೆ.ಬರೋರ, ಬ್ರಹ್ಮಾನಂದ ರೆಡ್ಡಿ, ಪಿ.ವಿ.ನರಸಿಂಹರಾವ್, ಸೀತಾರಾಂ ಕೇಸರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು ಎಂದು ಚಿದಂಬರಂ ಹೇಳಿದ್ದಾರೆ.
ಸರಣಿ ಟ್ವೀಟ್‌ಗಳನ್ನು ಮಾಡಿರುವ ಚಿದಂಬರಂ ಪ್ರಧಾನಿಯವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ’ಪ್ರಧಾನಿಗಳು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಮತ್ತು ಅವರ ಕೊಡುಗೆಗಳ ಬಗ್ಗೆ ಮಾತನಾಡಲು ಸಾಕಷ್ಟು ಸಮಯವನ್ನು ವ್ಯಯಮಾಡುತ್ತಿರುವುದಕ್ಕೆ ಅವರಿಗೆ ಧನ್ಯವಾದಗಳು, ನೋಟು ರದ್ಧತಿ, ಜಿಎಸ್‌ಟಿ, ರಫೇಲ್ ಡೀಲ್, ಸಿಬಿಐ ಮತ್ತು ಆರ್‌ಬಿಐ ಬಗ್ಗೆ ಮಾತನಾಡಲು ಆ ಸಮಯದ ಅರ್ಧ ಭಾಗವನ್ನು ವ್ಯಯ ಮಾಡಲು ಪ್ರಧಾನಿಗಳಿಗೆ ಸಾಧ್ಯವೆ ಎಂದು ಪ್ರಶ್ನೆ ಮಾಡಿದ್ದಾರೆ.
ಛತ್ತೀಸ್‌ಗಡದ ಚುನಾವಣೆ ಸಭೆಯಲ್ಲಿ ಗಾಂಧಿ ಕುಟುಂಬವನ್ನು ಗುರಿ ಮಾಡಿಕೊಂಡು ಶುಕ್ರವಾರ ಮಾತನಾಡಿದ್ದರು. ನಾಲ್ಕು ತಲೆಮಾರುಗಳಿಂದ ದೇಶವನ್ನು ಆಳಿದ ಆ ಕುಟುಂಬದವರು ರಾಜಪೀಠದಲ್ಲಿ ಕುಳಿತು, ಬಡ ಮಕ್ಕಳ, ಬಡ ತಾಯಂದಿರ ಬಗ್ಗೆ ಹೇಗೆ ಅರ್ಥ ಮಾಡಿಕೊಳ್ಳಬಲ್ಲರು ಎಂದು ಮೋದಿ ಟೀಕಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.