ನವದೆಹಲಿ: ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರನ್ನುಮುಂದಿನ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಿ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಸುಪ್ರೀಂ ಕೋರ್ಟ್‌ನ ಎರಡನೇ ಅತಿ ಹಿರಿಯ ನ್ಯಾಯಮೂರ್ತಿಯಾಗಿರುವ ಗೊಗೊಯ್ ಅವರು ಅಕ್ಟೋಬರ್ 3ರಂದು ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಕ್ಟೋಬರ್ 2ರಂದು ನಿವೃತ್ತಿ ಹೊಂದಲಿದ್ದಾರೆ. ಅಕ್ಟೋಬರ್ 2ರಂದು ಸಾರ್ವತ್ರಿಕ ರಜೆ ಇರುವುದರಿಂದ ಅಕ್ಟೋಬರ್ 1ರಂದು ಕಾರ್ಯಾವಧಿ ಕೊನೆಯಾಗಲಿದೆ.
ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ಉತ್ತರಾಧಿಕಾರಿ ಶಿಫಾರಸು ಮಾಡುವಂತೆ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಕೆಲವು ದಿನಗಳ ಹಿಂದೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನು ಕೋರಿದ್ದರು. ನಿರ್ಗಮಿಸಲಿರುವ ಮುಖ್ಯ ನ್ಯಾಯಮೂರ್ತಿ ಅವರ ಉತ್ತರಾಧಿಕಾರಿಯಾಗಿ ಹಿರಿಯ ನ್ಯಾಯಮೂರ್ತಿ ಹೆಸರು ಶಿಫಾರಸು ಮಾಡುವುದು ಹಿಂದಿನಿಂದಲೂ ಪಾಲಿಸುತ್ತಿರುವ ಸಂಪ್ರದಾಯವಾಗಿದೆ.
ನ್ಯಾಯಮೂರ್ತಿ ಗೊಗೊಯ್ ಅವರು 2019ರ ನವೆಂಬರ್ 17ರ ವರೆಗೂ ಮುಖ್ಯ ನ್ಯಾಯಮೂರ್ತಿ ಸ್ಥಾನ ನಿರ್ವಹಿಸಲಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.
ಪ್ರಸ್ತುತ ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ರಂಜನ್ ಗೊಗೊಯ್, ಈ ಹಿಂದೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯವೈಖರಿಯನ್ನು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದ್ದರು.
ಮೆದು ಮಾತಿನ, ಆದರೆ ಅತ್ಯಂತ ಕಠಿಣ ನ್ಯಾಯಮೂರ್ತಿ ಎಂದು ಹೆಸರಾಗಿರುವ ನ್ಯಾಯಮೂರ್ತಿ ಗೊಗೊಯ್, 2012ರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 1954ರಲ್ಲಿ ಜನಿಸಿದ ಅವರು, 1978ರಲ್ಲಿ ವಕೀಲರಾಗಿ ಕಾರ್ಯಾರಂಭಿಸಿದರು. 2001ರ ಫೆಬ್ರುವರಿ 28ರಂದು ಗುವಾಹಟಿ ಹೈ ಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಅಲ್ಲಿಂದ 2010ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ವರ್ಗಾವಣೆಯಾಗಿ 2011ರಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.