ಬೆಂಗಳೂರು: ನಿವೃತ್ತಿ ಹೊಸ್ತಿಲಲ್ಲಿರುವ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ ಚಂದ್ರಚೂಡ್ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
ಈ ಬಗ್ಗೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸದ್ಯ ಚಂದ್ರಚೂಡ್ ಅವರ ಬಳಿಕ ಸಂಜೀವ್ ಖನ್ನಾ ಅವರೇ ಹಿರಿಯ ನ್ಯಾಯಮೂರ್ತಿಯಾಗಿದ್ದಾರೆ.
ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತಿಯಾಗಲಿದ್ದಾರೆ. ಸಂಜೀವ್ ಖನ್ನಾ ಅವರ ಸೇವಾವಧಿ 2025ರ ಮೇ 13ರ ವರೆಗೆ ಇರಲಿದೆ. ಒಂದು ವೇಳೆ ಸಿಜೆಐ ಆಗಿ ಆಯ್ಕೆಯಾದರೆ ಅವರು 6 ತಿಂಗಳು ಆ ಸ್ಥಾನದಲ್ಲಿ ಇರಲಿದ್ದಾರೆ.
1983ರಲ್ಲಿ ವಕೀಲಿಕೆ ಆರಂಭಿಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ, ತೆರಿಗೆ, ಮಧ್ಯಸ್ಥಿಕೆ, ವಾಣಿಜ್ಯ ಮತ್ತು ಪರಿಸರ ವಿಷಯ ಸೇರಿ ಹಲವು ವಿಷಯಗಳಲ್ಲಿ ಪರಿಣಿತರು.
2005ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದ ಅವರು, ಒಂದು ವರ್ಷದ ಬಳಿಕ ಖಾಯಂ ನ್ಯಾಯಮೂರ್ತಿಯಾದರು. 2019ರ ಜೂನ್ 18ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.