ಮುಂಬೈ: ಕೋವಿಡ್ ಲಾಕ್‌ಡೌನ್ ನಂತರ ಮಹಾರಾಷ್ಟ್ರದಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗಿದೆ ಎಂದು ಮಹಾರಾಷ್ಟ್ರ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಚಕಂಕರ್, ‘ಲಾತೂರ್ ಜಿಲ್ಲೆ ಒಂದರಲ್ಲೇ ಸುಮಾರು 37 ಬಾಲ್ಯ ವಿವಾಹಗಳನ್ನು ತಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ’ ಎಂದರು.
‘ಬಾಲ್ಯವಿವಾಹ ತಡೆಗಟ್ಟುವ ಸಲುವಾಗಿ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು. ಇದು ಗ್ರಾಮಸಭೆಯಿಂದಲೇ ಪ್ರಾರಂಭವಾಗಬೇಕು. ಮದುವೆಯ ಆಮಂತ್ರಣ ಪತ್ರ ಮುದ್ರಿಸುವ ಘಟಕಗಳಿಂದ ಹಿಡಿದು ಬಾಲ್ಯವಿವಾಹದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಸಿದರು.
‘ಮಕ್ಕಳು ಮತ್ತು ಪೋಷಕರ ನಡುವಿನ ಸಂವಹನ ಕೊರತೆಯೇ (communication gap) ಮಕ್ಕಳು ಪ್ರೀತಿ, ಪ್ರೇಮದಂತಹ ಮೋಹಕ್ಕೆ ಬೀಳಲು ಕಾರಣವಾಗಿದೆ. ಮೊಬೈಲ್‌ಗಳು ಸಂವಹನ ಕೊರತೆಯನ್ನು ಇನ್ನಷ್ಟು ಹೆಚ್ಚು ಮಾಡಿವೆ. ಸಂವಹನ ಕೊರತೆ ಬಾಲ್ಯವಿವಾಹ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ’ ಎಂದು ಹೇಳಿದರು.
‘ಆಯೋಗದ ‘ಮಹಿಳಾ ಆಯೋಗ್ ಆಪ್ಲ್ಯಾ ದಾರಿ‘ ಉಪಕ್ರಮದಡಿಯಲ್ಲಿ 28 ಜಿಲ್ಲೆಗಳ ಸುಮಾರು 18,000 ದೂರುಗಳನ್ನು ಪರಿಹರಿಸಲಾಗಿದೆ. ಬಾಲ್ಯವಿವಾಹ ತಡೆಗಟ್ಟುವ ವಿಷಯದಲ್ಲಿ 'ದಾಮಿನಿ ಸ್ಕ್ವಾಡ್' ಪೊಲೀಸರ ಸಹಕಾರ ಬೇಕಿದ್ದು, ಹೆಣ್ಣು ಮಕ್ಕಳ ಜೊತೆ ಸಂವಹನ ನಡೆಸುವ ಅಗತ್ಯವಿದೆ’ ಎಂದು ಹೇಳಿದರು.
ಬಾಲ್ಯವಿವಾಹಗಳ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಅಂಕಿ ಅಂಶಗಳನ್ನು ಮಹಿಳಾ ಆಯೋಗ ನೀಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.