ಲಖನೌ: ಹದಿನೈದು ಮಕ್ಕಳನ್ನು ಅಕ್ರಮಬಂಧನದಲ್ಲಿ ಇರಿಸಿಕೊಂಡ ಗಂಡನಿಗೆ ಸಹಕಾರ ನೀಡಿದ್ದ ಆತನ ಪತ್ನಿಯನ್ನು ಗ್ರಾಮಸ್ಥರೇ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಇಲ್ಲಿನ ಫಾರುಕಬಾದ್‌ನಲ್ಲಿ ನಡೆದಿದೆ.
ಶುಕ್ರವಾರ ಈ ಘಟನೆ ನಡೆದಿದೆ. ವಿಷಯ ತಿಳಿದಾಗ ಪೊಲೀಸರು ಸ್ಥಳಕ್ಕೆ ಧಾವಿಸಿ ತೀವ್ರಗಾಯಗೊಂಡ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಆಕೆಯ ಗಂಡ ಹುಟ್ಟುಹಬ್ಬ ಆಚರಿಸುವುದಾಗಿ ಹೇಳಿ ಅಕ್ಕಪಕ್ಕದ ಮಕ್ಕಳನ್ನು ಮನೆಗೆ ಕರೆದಿದ್ದ. ಆ ನಂತರ ಮಕ್ಕಳನ್ನು ಆಚೆಗೆ ಬಿಡದೆ ಮನೆಯೊಳಗೆ ಕೂಡಿ ಹಾಕಿಕೊಂಡಿದ್ದ. ವಿಷಯತಿಳಿದ ಪೋಷಕರು ಬಾಗಿಲು ತೆರೆಯುವಂತೆ ಮನೆಯ ಬಳಿ ಹೋದರೂ ಬಂದೂಕಿನಿಂದ ಅವರಿಗೆ ಬೆದರಿಕೆ ಹಾಕಿದ್ದ. ಗಂಡನ ಜೊತೆ ಆತನ ಪತ್ನಿಯೂ ಸಹಕರಿಸಿದ್ದಳು ಎನ್ನಲಾಗಿದೆ.
ಗುರುವಾರ ಇಷ್ಟೆಲ್ಲಾ ಘಟನೆಗಳು ನಡೆದಿದ್ದವು. ವಿಷಯ ತಿಳಿದ ಉತ್ತರಪ್ರದೇಶ ಸರ್ಕಾರ ಒಂದು ವಿಶೇಷ ತಂಡ ರಚಿಸಿ ಮಕ್ಕಳನ್ನು ರಕ್ಷಿಸಲು ಆದೇಶಿಸಿತ್ತು. ಪೊಲೀಸರು ಶುಕ್ರವಾರ ಬೆಳಗಿನ ಜಾವಅಕ್ರಮ ಬಂಧನದಲ್ಲಿ ಇರಿಸಿಕೊಂಡಿದ್ದ ವ್ಯಕ್ತಿಯನ್ನು ಎನ್ಕೌಂಟರ್ ಮಾಡಿ ಮಕ್ಕಳನ್ನು ರಕ್ಷಿಸಿದ್ದಾರೆ.ಶುಕ್ರವಾರ ಬೆಳಿಗ್ಗೆ ಮನೆಯಲ್ಲಿಯೇ ಇದ್ದಪತ್ನಿ ಮನೆಯಿಂದಪರಾರಿಯಾಗಲು ಯತ್ನಿಸಿದ್ದಳು.
ಈ ವಿಷಯ ತಿಳಿದ ಗ್ರಾಮಸ್ಥರು ಆಕೆಯನ್ನು ಅಟ್ಟಾಡಿಸಿಕೊಂಡು ಕಲ್ಲುಗಳು, ಇಟ್ಟಿಗೆಗಳಿಂದ ಹೊಡೆದಿದ್ದರು. ಗ್ರಾಮಸ್ಥರಿಂದ ಹಲ್ಲೆಗೊಳಗಾದ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ರಕ್ತಸ್ರಾವವಾಗಿ,ತೀವ್ರ ಗಾಯಗೊಂಡಿದ್ದ ಆಕೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಅಕ್ರಮ ಬಂಧನದಲ್ಲಿ ಇರಿಸಿಕೊಂಡಿದ್ದ ಆರೋಪಿ ಕೊಲೆ ಪ್ರಕರಣದಲ್ಲಿ ಕಾರಾಗೃಹದಲ್ಲಿದ್ದ, ಇತ್ತೀಚೆಗಷ್ಟೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಎಂದು ಐಜಿಪಿ ಮೋಹಿತ್ ಅಗರವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಪೊಲೀಸರಿಗೆ 10 ಲಕ್ಷ ಬಹುಮಾನ ಘೋಷಿಸಿದ ಸಿಎಂ
ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ 10 ಲಕ್ಷ ಬಹುಮಾನ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.