ನವದೆಹಲಿ: ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿ ವಿವೊ ವಿರುದ್ಧ ಜಾರಿ ನಿರ್ದೇಶನಾಲಯದ (ಇ.ಡಿ)ಅಧಿಕಾರಿಗಳು ತನಿಖೆ ನಡೆಸುತ್ತಿರುವಂತೆಯೇ, ಸಂಸ್ಥೆಯ ನಿರ್ದೇಶಕರಾಗಿದ್ದ ಚೀನಾದ ವ್ಯಕ್ತಿಗಳು ಭಾರತದಿಂದ ಪಲಾಯನಗೈದಿದ್ದಾರೆ.
ಇ.ಡಿ ಅಧಿಕಾರಿಗಳು, ವಿವೊ ಕಂಪನಿಗೆ ಸೇರಿದ್ದ 44 ಸ್ಥಳಗಳಲ್ಲಿ ಬುಧವಾರ ದಾಳಿ ನಡೆಸಿದ್ದರು.
ಮೂಲಗಳ ಪ್ರಕಾರ, ವಿವೊ ಜತೆಗೆ ಸಂಪರ್ಕ ಹೊಂದಿರುವ ಹಿಮಾಚಲ ಪ್ರದೇಶದ ಸೋಲನ್ ಕಂಪನಿಯಲ್ಲಿ ನಿರ್ದೇಶಕರಾಗಿದ್ದ ಚೀನಾದ ಇಬ್ಬರು ಪ್ರಜೆಗಳು ಭಾರತ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.
ವಿವೊ ಮತ್ತು ಅದರ ಸಹವರ್ತಿ ಕಂಪನಿಗಳು ಭಾರತದಲ್ಲಿ ನಕಲಿ ದಾಖಲೆ ಬಳಸಿ, ಚೀನಾದ ವ್ಯಕ್ತಿಗಳನ್ನು ನಿರ್ದೇಶಕರನ್ನಾಗಿ ನೇಮಿಸಿಕೊಂಡಿವೆ.
ದಾಳಿಯ ವೇಳೆ ಇ.ಡಿ ಅಧಿಕಾರಿಗಳು ₹10,000 ಕೋಟಿ ಹಣಕಾಸು ಅಕ್ರಮವರ್ಗಾವಣೆ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಭಾರತದಲ್ಲಿ ಚೀನಾ ಕಂಪನಿಗಳ ಅಕ್ರಮ ಹಣಕಾಸು ವರ್ಗಾವಣೆ ಕುರಿತು ಸಿಬಿಐ ಕೂಡ ತನಿಖೆ ನಡೆಸುತ್ತಿದ್ದು, ಪ್ರತ್ಯೇಕ ಎಫ್‌ಐಆರ್ ದಾಖಲಿಸಿದೆ.
ಇ.ಡಿ ದಾಳಿ ಕುರಿತು ಸುದ್ದಿಸಂಸ್ಥೆ ಐಎಎನ್‌ಎಸ್‌ಗೆ ಹೇಳಿಕೆ ನೀಡಿರುವ ವಿವೊ ವಕ್ತಾರರು, ಅಧಿಕಾರಿಗಳಿಗೆ ತನಿಖೆಗೆ ಎಲ್ಲ ರೀತಿಯಲ್ಲಿಯೂ ಸಹಕರಿಸುತ್ತೇವೆ ಮತ್ತು ಅಗತ್ಯ ಮಾಹಿತಿ ಒದಗಿಸುತ್ತೇವೆ ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಶಓಮಿ ಟೆಕ್ನಾಲಜಿ ಇಂಡಿಯಾ ಪ್ರೈ. ಲಿ.ಗೆ ಸೇರಿದ್ದ ₹5,551.27 ಕೋಟಿ ಹಣವನ್ನು ಇ.ಡಿ ವಶಪಡಿಸಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.