ನವದೆಹಲಿ: ಪಾಕಿಸ್ತಾನ ಮೂಲದ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಅಂತರರಾಷ್ಡ್ರೀಯ ಭಯೋತ್ಪಾದಕ ಎಂದು ಘೋಷಿಸಬೇಕೆಂಬ ಭಾರತ ಹಾಗೂ ಅಮೆರಿಕದ ಜಂಟಿ ಪ್ರಸ್ತಾವಕ್ಕೆ ತಡೆಯೊಡ್ಡಲು ಚೀನಾ ನಿರ್ಧರಿಸಿದೆ. ಈ ನಡೆ ಭಯೋತ್ಪಾದನೆಗೆ ಸಂಬಂಧಿಸಿ ಚೀನಾದ ದ್ವಂದ್ವ ನೀತಿಯನ್ನು ಬಹಿರಂಗಗೊಳಿಸಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ.
ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಸಮಿತಿಯ ಮುಂದೆ ಮಂಡಿಸಿರುವ ಈ ಪ್ರಸ್ತಾವವನ್ನು ವಿರೋಧಿಸುವ ನಿರ್ಧಾರವನ್ನು ಚೀನಾ ಕೈಗೊಂಡಿದೆ. ಹೀಗಾಗಿ, ಭಯೋತ್ಪಾದನೆ ನಿಗ್ರಹಕ್ಕಾಗಿ ತಾನು ಹೋರಾಡುತ್ತಿರುವುದಾಗಿ ಚೀನಾ ಹೇಳುತ್ತಿದ್ದರೂ, ತನ್ನ ಹೇಳಿಕೆಗೆ ವಿರುದ್ಧವಾಗಿಯೇ ಆ ರಾಷ್ಟ್ರ ನಡೆದುಕೊಳ್ಳುತ್ತಿದೆ ಎಂದು ಮೂಲಗಳು ಹೇಳಿವೆ.
ನಿರ್ಬಂಧ ಹೇರುವುದರಿಂದ ಭಯೋತ್ಪಾದಕರನ್ನು ರಕ್ಷಿಸುವ ಚೀನಾದ ಕ್ರಮವು ಅದರ ವಿಶ್ವಾಸಾರ್ಹತೆಗೇ ಧಕ್ಕೆ ತರುತ್ತದೆ. ಅಲ್ಲದೇ, ಹೆಚ್ಚುತ್ತಿರುವ ಭಯೋತ್ಪಾದನೆಯಿಂದ ಆ ದೇಶವೂ ಹೆಚ್ಚು ಅಪಾಯ ಎದುರಿಸಲಿದೆ ಎಂದು ಹೇಳಿವೆ.
ಸಮರ್ಥನೆ: ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಚೀನಾ,‘ಈಗಾಗಲೇ ಜಾರಿಯಲ್ಲಿರುವ ನಿಯಮಗಳ ಆಧಾರದಲ್ಲಿಯೇ ತಾನು ಈ ನಿರ್ಧಾರ ಕೈಗೊಂಡಿರುವುದಾಗಿ’ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.