ADVERTISEMENT

ಪ್ರವಾಹ ಬಂದಾಗ ಮೋದಿ ಎಲ್ಲಿದ್ದರು?: ಕಾಂಗ್ರೆಸ್

ಪಿಟಿಐ
Published 25 ಮೇ 2024, 14:26 IST
Last Updated 25 ಮೇ 2024, 14:26 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಶಿಮ್ಲಾ/ಹಮೀರಪುರ: ಹಿಮಾಚಲ ಪ್ರದೇಶ ಸರ್ಕಾರವು ಪ್ರವಾಹ ಸಂತ್ರಸ್ತರಿಗೆ ಪರಿಹಾರವನ್ನು ಸರಿಯಾಗಿ ವಿತರಿಸಿಲ್ಲ ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡಿದ್ದು, ಕೇಂದ್ರವು ವಿಪತ್ತು ಪರಿಹಾರವಾಗಿ ರಾಜ್ಯಕ್ಕೆ ಎಷ್ಟು ಹಣ ನೀಡಿದೆ ಎಂಬುದನ್ನು ಹೇಳಲಿ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ಸುಖ್‌ವಿಂದರ್ ಸಿಂಗ್ ಸುಖು, ‘ಹಿಮಾಚಲ ಪ್ರದೇಶ ಸರ್ಕಾರಕ್ಕೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್‌ ಅಡಿ ಲಭ್ಯವಿರುವ ಹಣವಷ್ಟೇ ಸಿಕ್ಕಿದೆ. ರಾಜ್ಯವು ಕೇಂದ್ರಕ್ಕೆ ₹9,900 ಕೋಟಿಯ ಪರಿಷ್ಕೃತ ಅಂದಾಜು ಮೊತ್ತಕ್ಕಾಗಿ ಮನವಿ ಸಲ್ಲಿಸಿತ್ತು. ಆದರೆ, ಕೇಂದ್ರ ಸರ್ಕಾರವು ಹಣ ನೀಡಲೇ ಇಲ್ಲ. ಬಿಜೆಪಿ ನಾಯಕರು ಈ ವಿಚಾರದ ಬಗ್ಗೆ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು’ ಎಂದು ಹೇಳಿದರು. 

‘ಪ್ರಧಾನಿ ಮೋದಿ ಅವರು ಕಳೆದ ಮಳೆಗಾಲದ ಪ್ರವಾಹದ ಸಂದರ್ಭದಲ್ಲಿ ಹಿಮಾಚಲಕ್ಕೆ ಭೇಟಿ ನೀಡಿದ್ದರೆ ರಾಜ್ಯದ ಜನರಿಗೆ ಸಂತೋಷವಾಗುತ್ತಿತ್ತು’ ಎಂದು ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದರು.

ADVERTISEMENT

‘ರಾಜ್ಯವು ವಿಶೇಷ ಪ್ಯಾಕೇಜ್‌ಗಾಗಿ ಮನವಿ ಮಾಡಿದರೆ, ಸಿಕ್ಕಿದ್ದು ಕೇವಲ ₹300 ಕೋಟಿ. ಅದೂ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಅಡಿ ಮಾತ್ರ. ಹಿಮಾಚಲವನ್ನು ತಮ್ಮ ಎರಡನೆಯ ಮನೆ ಎಂದು ಕರೆದುಕೊಳ್ಳುವ ಪ್ರಧಾನಿ ‍ಪ್ರವಾಹದ ಸಂದರ್ಭದಲ್ಲಿ ಎಲ್ಲಿದ್ದರು’ ಎಂದು ವಿಡಿಯೊ ಸಂದೇಶದಲ್ಲಿ ಸಿಂಗ್ ಪ್ರಶ್ನಿಸಿದ್ದಾರೆ.

ಸುಖ್‌ವಿಂದರ್ ಸಿಂಗ್ ಸುಖು

‘ಚೀನಾ ಅತಿಕ್ರಮಣ: 56 ಇಂಚಿನ ಎದೆ ಎಲ್ಲಿದೆ?’: ಚೀನಾ ದೇಶವು ಭಾರತದ ನೆಲವನ್ನು ಅತಿಕ್ರಮಿಸಿದ್ದು ಮನೆ ರಸ್ತೆ ನಿರ್ಮಿಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಆರೋಪಿಸಿದರು. 56 ಇಂಚಿನ ಎದೆ ಎಲ್ಲಿದೆ ಎಂದು ಪ್ರಶ್ನಿಸಿದರು. ಹಿಮಾಚಲ ಪ್ರದೇಶದ ರೊಹ್ರುವಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ‘ನಾವು ಪಾಕಿಸ್ತಾನದ ವಿರುದ್ಧ ಹೋರಾಡಿದೆವು ಬಾಂಗ್ಲಾ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟೆವು’ ಎಂದು ಪ್ರತಿಪಾದಿಸಿದರು.  ಹಿಮಾಚಲ ಪ್ರದೇಶದಲ್ಲಿ 2023ರಲ್ಲಿ ಪ್ರವಾಹಗಳು ಬಂದರೂ ಕೇಂದ್ರ ಸರ್ಕಾರವು ನೆರವು ನೀಡಲಿಲ್ಲ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.