ADVERTISEMENT

ಅರುಣಾಚಲ ಪ್ರದೇಶ ತನ್ನದು ಎಂದ ಚೀನಾಗೆ ತಿರುಗೇಟು ನೀಡಿದ ಕೇಂದ್ರ ಸಚಿವ ರಿಜಿಜು

ಪಿಟಿಐ
Published 20 ಮಾರ್ಚ್ 2024, 11:07 IST
Last Updated 20 ಮಾರ್ಚ್ 2024, 11:07 IST
<div class="paragraphs"><p>ಕಿರಣ್ ರಿಜಿಜು</p></div>

ಕಿರಣ್ ರಿಜಿಜು

   

ಇಟಾನಗರ್‌: ಅರುಣಾಚಲ ಪ್ರದೇಶವು ತನ್ನದು ಎಂದು ಹೇಳಿರುವ ಚೀನಾಗೆ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ತಿರುಗೇಟು ನೀಡಿದ್ದಾರೆ. ಅರುಣಾಚಲಕ್ಕೂ ಚೀನಾಗೂ ಐತಿಹಾಸಿಕವಾಗಿ ಯಾವುದೇ ಸಂಬಂಧವಿಲ್ಲ. ಅದು ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದ್ದಾರೆ.

ಚೀನಾ ಸೇನೆಯು ಅರುಣಾಚಲ ಪ್ರದೇಶ 'ಚೀನಾದ ಸ್ವಾಭಾವಿಕ ಭೂಪ್ರದೇಶ' ಎಂದು ಇತ್ತೀಚೆಗೆ ಹೇಳಿತ್ತು. ಈಶಾನ್ಯ ಭಾರತದ ರಾಜ್ಯವಾಗಿರುವ ಇಲ್ಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದ ಬಗ್ಗೆಯೂ ತಕರಾರು ತೆಗೆದಿತ್ತು. ಈ ಸಂಬಂಧ ರಿಜಿಜು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಐತಿಹಾಸಿಕವಾಗಿ ನಾವು ಚೀನಾದೊಂದಿಗೆ ಯಾವುದೇ ರೀತಿಯ ಸಂಬಂಧವನ್ನು ಹೊಂದಿಲ್ಲ. ಅರುಣಾಚಲ ಪ್ರದೇಶ ಭಾರತದ್ದು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ನಮ್ಮ ರಾಜ್ಯವನ್ನು ಚೀನಾ ತನ್ನದು ಎಂದು ಹೇಳಿಕೊಳ್ಳುವುದರಿಂದ ವಾಸ್ತವ ಬದಲಾಗದು. ನಮ್ಮ ನಿಲುವು ಸ್ಪಷ್ಟವಾಗಿದೆ. ಅರುಣಾಚಲ ಪ್ರದೇಶ ಭಾರತದ್ದು. ನಮ್ಮ ಪ್ರದೇಶವನ್ನು ಅಭಿವೃದ್ಧಿಪಡಿಸುವ ಸಾರ್ವಭೌಮ ಹಕ್ಕು ನಮಗಿದೆ. ಅದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದಿದ್ದಾರೆ.

ಲೋಕಸಭೆಯಲ್ಲಿ 'ಅರುಣಾಚಲ ಪಶ್ಚಿಮ' ಕ್ಷೇತ್ರವನ್ನು ಪ್ರತಿನಿಧಿಸುವ ರಿಜಿಜು, ಅರುಣಾಚಲ ಪ್ರದೇಶಕ್ಕೆ ಮೋದಿ ಭೇಟಿ ನೀಡಿದ್ದನ್ನು ಚೀನಾ ವಿರೋಧಿಸಿರುವುದಕ್ಕೆ ತಿರುಗೇಟು ನೀಡಿದ್ದಾರೆ. ರಾಜ್ಯವು ಭಾರತದ ಅವಿಭಾನ್ಯ ಅಂಗವಾಗಿದೆ. ಇಲ್ಲಿನ ಯಾವುದೇ ಭಾಗಕ್ಕೆ ಪ್ರಧಾನಿ ಮೋದಿ ಮಾತ್ರವಲ್ಲ, ಕೇಂದ್ರ ಸರ್ಕಾರದ ಯಾವುದೇ ಸಂಸ್ಥೆ, ದೇಶದ ಯಾವೊಬ್ಬ ನಾಗರಿಕ ಭೇಟಿ ನೀಡಬಹುದು ಎಂದು ಒತ್ತಿ ಹೇಳಿದ್ದಾರೆ.

'ಚೀನಾದ ಹೇಳಿಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ' ಎಂದೂ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಮೊದಲು ಚೀನಾ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಇಲಾಖೆ, ಅರುಣಾಚಲ ಪ್ರದೇಶವು 'ಹಿಂದೆ, ಈಗ ಮತ್ತು ಎಂದೆಂದಿಗೂ ಭಾರತದ್ದು' ಎಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.