ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಪೂರ್ವ ಲಡಾಖ್‌ನ ಪಾಂಗಾಂಗ್ ಸರೋವರ ಪ್ರದೇಶದಲ್ಲಿ ಸೇನೆ ಮತ್ತು ಶಸ್ತ್ರಸಜ್ಜಿತ ವಾಹನಗಳ ಸುಗಮ ಸಂಚಾರಕ್ಕಾಗಿ ತಮ್ಮ ಪ್ರದೇಶದಲ್ಲಿ ಎರಡನೇ ಸೇತುವೆ ನಿರ್ಮಿಸುತ್ತಿರುವುದನ್ನು ಉಪಗ್ರಹ ಚಿತ್ರಗಳು ಬಹಿರಂಗಪಡಿಸಿವೆ.
ಹೊಸ ಸೇತುವೆಯು ಸರೋವರದ ಉತ್ತರ ಭಾಗದಲ್ಲಿರುವ ಫಿಂಗರ್ 8 ಪ್ರದೇಶಕ್ಕೆ ಸಣ್ಣ ಮತ್ತು ನೇರ ಮಾರ್ಗದ ಮೂಲಕ ಸರೋವರ ಮತ್ತು ಚೀನಾ ಭಾಗದ ಆಳ ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸಬಹುದು. ಇದು ಪ್ರಸ್ತುತ ಬಫರ್ ವಲಯದ ಗಡಿಯಾಗಿದೆ.
ಹೊಸ ಸೇತುವೆ ನಿರ್ಮಾಣವು ಪೂರ್ವ ಲಡಾಖ್‌ನಲ್ಲಿ ನಡೆಯುತ್ತಿರುವ ಪಿಎಲ್‌ಎ ಮೂಲಸೌಕರ್ಯ ಅಭಿವೃದ್ಧಿ ಕಾರ್ಯದ ಮುಂದುವರಿಕೆಯಾಗಿದೆ. ಈ ಪ್ರದೇಶದಲ್ಲಿ ಒಂದು ತಿಂಗಳ ಹಿಂದೆ ಸಣ್ಣ ಸೇತುವೆಯನ್ನು ನಿರ್ಮಿಸಲಾಗಿದೆ. ಸರೋವರದ ಸುತ್ತಲೂ ಪಡೆಗಳನ್ನು ತ್ವರಿತವಾಗಿ ಸಜ್ಜುಗೊಳಿಸಲು ರಸ್ತೆ ಜಾಲವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಹಿಂದೆ ಇಲ್ಲಿಯೇ ಭಾರತ ಮತ್ತು ಚೀನಾ
ಸೈನಿಕರ ನಡುವೆ ಮುಖಾಮುಖಿಯಾಗಿತ್ತು.
ಹೊಸ ಸೇತುವೆಯು ಜುಲೈ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಪಿಎಲ್‌ಎ ಪಡೆಗಳ ಪ್ರಧಾನ ಕೇಂದ್ರವಾದ ಖುರ್ನಾಕ್ ಫೋರ್ಟ್ ಮತ್ತು ರುಟೋಗ್ ನಡುವೆ 180 ಕಿ.ಮೀ. ಅಂತರವನ್ನು ಕಡಿಮೆ ಮಾಡುತ್ತದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.