ನವದೆಹಲಿ: ಭಾರತ ಸೇರಿದಂತೆ ವಿಶ್ವದಾದ್ಯಂತ ಚೀನಾ ಪರ ನಿಲುವುಗಳನ್ನು ಪ್ರಚುರಪಡಿಸಲು ₹ 80 ಕೋಟಿ ವಿದೇಶಿ ಆರ್ಥಿಕ ನೆರವು ಪಡೆದ ಆರೋಪ ಹೊತ್ತಿರುವ ‘ನ್ಯೂಸ್ ಕ್ಲಿಕ್’ ವೆಬ್‌ಸೈಟ್ ವಿರುದ್ಧ ಜಾರಿ ನಿರ್ದೇಶನಾಲಯವು(ಇ.ಡಿ) ಶೀಘ್ರವೇ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಸೋಮವಾರ ಮೂಲಗಳು ತಿಳಿಸಿವೆ.
ಭಾರತದ ಈ ನ್ಯೂಸ್ ಪೋರ್ಟಲ್‌ಗೆ ಚೀನಾದಿಂದ ಹಣ ಸಂದಾಯವಾಗಿರುವ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಟಿಸಿದೆ. 2021ರ ಸೆಪ್ಟೆಂಬರ್‌ಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪೋರ್ಟಲ್‌ನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಸೇರಿದಂತೆ ಅದರ ಪ್ರವರ್ತಕರ ವಿರುದ್ಧ ಇ.ಡಿ ದಾಳಿ ನಡೆಸಿ ಪ್ರಕರಣ ದಾಖಲಿಸಿತ್ತು. ಆ ವೇಳೆ ಕಾಂಗ್ರೆಸ್ ಪಕ್ಷವು ವೆಬ್‌ಸೈಟ್ ಪರವಾಗಿ ನಿಂತಿತ್ತು.
ಚೀನಾ ಪರವಾಗಿ ಪ್ರಚಾರ ನೀಡಲು ಅಮೆರಿಕದ ಕೋಟ್ಯಧೀಶ ನೆವಿಲ್ಲೆ ರಾಮ್ ಸಿಂಘಂ ಎಂಬುವರು ಹಣ ಹೂಡಿಕೆ ಮಾಡಿದ್ದಾರೆ ಎಂದು ಎನ್ನಲಾಗಿದೆ.
ಆಧಾರರಹಿತ ಆರೋಪ: ಇದಕ್ಕೆ ಪ್ರತಿಕ್ರಿಯಿಸಿರುವ ನ್ಯೂಸ್ ಪೋರ್ಟಲ್, ‘ಕೆಲವು ರಾಜಕೀಯ ನಾಯಕರು ಹಾಗೂ ಮಾಧ್ಯಮಗಳಲ್ಲಿ ಇರುವವರು ವಾಸ್ತವಾಂಶ ಅರಿಯದೆ ನಮ್ಮ ವಿರುದ್ಧ ಆಧಾರರಹಿತ ಆರೋಪ ಮಾಡುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದೆ.
ವೆಬ್‌ಸೈಟ್ ವಿರುದ್ಧ ಸುಳ್ಳು ಆರೋಪ ಮಾಡುವುದು ಸರಿಯಲ್ಲ. ನ್ಯಾಯಾಲಯದಲ್ಲಿ ಪ್ರಕರಣವು ವಿಚಾರಣೆಯ ಹಂತದಲ್ಲಿದೆ. ದೇಶದ ಕಾನೂನನ್ನು ಗೌರವಿಸುವುದು ನಮ್ಮ ಕರ್ತವ್ಯ. ಮಾಧ್ಯಮಗಳು ನಡೆಸುವ ವಿಚಾರಣೆಯಲ್ಲಿ ಪಾಲ್ಗೊಳ್ಳುವ ಉದ್ದೇಶವಿಲ್ಲ’ ಎಂದಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವರದಿ ಉಲ್ಲೇಖಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು, ‘ನ್ಯೂಸ್ ಪೋರ್ಟಲ್ ಚೀನಾದ ಪರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ. ಇದರ ಕಾರ್ಯವೈಖರಿ ಬಗ್ಗೆ ಕೇಂದ್ರ ಸರ್ಕಾರವು 2021ರಿಂದಲೂ ಎಚ್ಚರಿಸುತ್ತಿದೆ ಎಂದಿದ್ದಾರೆ.
ರಾಹುಲ್ ಅಂಗಡಿಯಲ್ಲಿ ಚೀನಿ ಸರಕು ಮಾರಾಟ: ಬಿಜೆಪಿ
‘ಭಾರತ ವಿರೋಧಿ ಕೃತ್ಯದಲ್ಲಿ ಕಾಂಗ್ರೆಸ್, ಚೀನಾ ಹಾಗೂ ನ್ಯೂಸ್ ಕ್ಲಿಕ್ ನಡುವೆ ಹೊಕ್ಕಳು ಬಳ್ಳಿಯ ಸಂಬಂಧವಿದೆ. ರಾಹುಲ್ ಗಾಂಧಿ ಅವರ ನಕಲಿ ‘ಪ್ರೀತಿಯ ಅಂಗಡಿ’ಯಲ್ಲಿ (ಮೊಹಬತ್ ಕಿ ದುಕಾನ್) ಚೀನಿ ಸರಕುಗಳು ಮಾರಾಟವಾಗುತ್ತಿವೆ’ ಎಂದು ಬಿಜೆಪಿ ಲೇವಡಿ ಮಾಡಿದೆ.
ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ನ್ಯೂಯಾರ್ಕ್ ಟೈಮ್ಸ್‌ನ ವರದಿ ಉಲ್ಲೇಖಿಸಿ ಮಾತನಾಡಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹಾಗೂ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ‘ನ್ಯೂಸ್ ಪೋರ್ಟಲ್ ಚೀನಾದ ಪರವಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದೆ’ ಎಂದು ಟೀಕಿಸಿದರು.
ಇದರ ಕಾರ್ಯವೈಖರಿ ಬಗ್ಗೆ ಕೇಂದ್ರ ಸರ್ಕಾರವು 2021ರಿಂದಲೂ ಎಚ್ಚರಿಸುತ್ತಿದೆ. ವಿದೇಶಿ ಕೈಗಳು ಹೇಗೆ ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿವೆ ಎಂಬ ಬಗ್ಗೆ ಆಗಲೇ ಬಹಿರಂಗಪಡಿಸಿದ್ದೆವು ಎಂದರು.
ಎರಡು ವರ್ಷದ ಹಿಂದೆ ಈ ಪೋರ್ಟಲ್ ಮೇಲೆ ಇ.ಡಿ ದಾಳಿ ನಡೆಸಿತ್ತು. ಆಗ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳು ಅದರ ಬೆನ್ನಿಗೆ ನಿಂತಿದ್ದವು. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸಲಾಗುತ್ತಿದೆ ಎಂದು ಕೇಂದ್ರದ ಕ್ರಮವನ್ನೇ ಪ್ರಶ್ನಿಸಿದ್ದವು ಎಂದು ದೂರಿದರು.
ಚೀನಾ ಮಾಧ್ಯಮ ಕಂಪನಿ ಮಕು ಗುಂಪಿನ ಜೊತೆಗೆ ನೆವಿಲ್ಲೆ ರಾಯ್ ಅವರಿಗೆ ನಿಕಟ ಸಂಬಂಧವಿದೆ. ಚೀನಾದಿಂದ ಆತನಿಗೆ ಹಣ ಪೂರೈಕೆಯಾಗಿದೆ. ಹಣ ಪಡೆದು ಚೀನಾ ನಿಲುವುಗಳನ್ನು ಹರಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡ ಬೆಂಬಲ ನೀಡುತ್ತಿದೆ ಎಂದು ಆಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.