ಬೀಜಿಂಗ್: ಚೀನಾ ಮತ್ತು ಭಾರತವು ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಿಕಟ ಸಂವಹನವನ್ನು ನಡೆಸುತ್ತಿದ್ದು, ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಸಕಾರಾತ್ಮಕ ಪ್ರಗತಿಯನ್ನು ಸಾಧಿಸಿವೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಹೇಳಿದ್ದಾರೆ.
ಚೀನಾಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಗುರುವಾರವಷ್ಟೇ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರಾದ ಮಾವೊ ನಿಂಗ್ ಅವರು, ಶುಕ್ರವಾರ ತಮ್ಮ ಪ್ರತಿಕ್ರಿಯೆಯನ್ನು ಇನ್ನಷ್ಟು ವಿವರಿಸಿದರು.
ನ್ಯೂಸ್‌ವೀಕ್ ಮ್ಯಾಗ್‌ಜಿನ್‌ಗೆ ನೀಡಿದ್ದ ಸಂದರ್ಶನದಲ್ಲಿ ಮೋದಿ ಅವರು, ಉಭಯ ದೇಶಗಳ ಗಡಿಯಲ್ಲಿ ಬಹುಕಾಲದಿಂದ ಉಂಟಾಗಿರುವ ಪರಿಸ್ಥಿತಿಯನ್ನು ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದಲ್ಲಿ ಸಕಾರಾತ್ಮಕ ಮತ್ತು ರಚನಾತ್ಮಕವಾಗಿ ದ್ವಿಪಕ್ಷೀಯ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಈ ಮೂಲಕ ಗಡಿಯಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಪುನಃ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು.
ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾವೊ ನಿಂಗ್, ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಎರಡೂ ದೇಶಗಳು ರಾಜತಾಂತ್ರಿಕ ಮತ್ತು ಮಿಲಿಟರಿ ಹಂತದಲ್ಲಿ ನಿಕಟ ಸಂವಹನ ನಡೆಸುತ್ತಿವೆ. ಇದರಿಂದ ಸಕಾರಾತ್ಮಕ ಪ್ರಗತಿಯನ್ನೂ ಸಾಧಿಸಲಾಗಿದೆ ಎಂದರು.
‘ಎರಡೂ ದೇಶಗಳ ಹಿತಾಸಕ್ತಿ ಕಾಯ್ದುಕೊಳ್ಳಲು ಉಭಯ ದೇಶಗಳ ಸಂಬಂಧಗಳು ಆರೋಗ್ಯಕರವಾಗಿರಬೇಕು ಎಂದು ನಾವು ನಂಬುತ್ತೇವೆ’ ಎಂದು ಅವರು ತಿಳಿಸಿದರು.
ಪ್ಯಾಂಗಾಂಗ್ ಸರೋವರ ಪ್ರದೇಶದಲ್ಲಿ 2020ರ ಮೇ 5ರಂದು ಹಿಂಸಾತ್ಮಕ ಘರ್ಷಣೆ ನಡೆದ ಬಳಿಕ ಪೂರ್ವ ಲಡಾಖ್ ಗಡಿ ಬಿಕ್ಕಟ್ಟು ಸ್ಫೋಟಗೊಂಡಿತು. ಆಗಿನಿಂದ ಭಾರತ ಮತ್ತು ಚೀನಾ ನಡುವಿನ ಸಂಬಂಧ ಹಳಸಿತು. ಬಿಕ್ಕಟ್ಟು ಪರಿಹರಿಸಲು ಉಭಯ ದೇಶಗಳ ಕಡೆಯಿಂದ ಸೇನಾ ಕಮಾಂಡರ್‌ಗಳ ಮಟ್ಟದಲ್ಲಿ 21 ಸುತ್ತಿನ ಮಾತುಕತೆಗಳು ನಡೆದಿವೆ.
ಚೀನಾ ಸೇನೆಯ ಪ್ರಕಾರ, ಗಾಲ್ವಾನ್ ಕಣಿವೆ, ಪ್ಯಾಂಗಾಂಗ್ ಸರೋವರ, ಹಾಟ್‌ಸ್ಟ್ರಿಂಗ್ಸ್ ಮತ್ತು ಗೋಗ್ರಾದಿಂದ (ನಾಲ್ಕು ಪಾಯಿಂಟ್) ಉಭಯ ದೇಶಗಳು ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿವೆ.
ಭಾರತವು, ಡೆಪ್ಸಾಂಗ್ ಮತ್ತು ಡೆಮ್‌ಚೋಕ್ ಪ್ರದೇಶಗಳಿಂದ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಅನ್ನು ಹಿಂತೆಗೆದುಕೊಳ್ಳುವಂತೆ ಒತ್ತಡ ಹೇರುತ್ತಿದೆ. ಗಡಿಯಲ್ಲಿ ಉದ್ವಿಗ್ನ ಸ್ಥಿತಿ ಇರುವವರೆಗೂ ಚೀನಾದೊಂದಿಗೆ ತನ್ನ ಸಂಬಂಧದಲ್ಲಿ ಸಹಜತೆಯ ಪುನರ್ ಸ್ಥಾಪನೆ ಸಾಧ್ಯವಿಲ್ಲ ಎಂದು ಭಾರತ ಪ್ರತಿಪಾದಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.