ನವದೆಹಲಿ: ಚೀನಾಗೆ ಸೇರಿದ ಭೂಭಾಗದಲ್ಲಿ ಅರುಣಾಚಲ ಪ್ರದೇಶದ ಬಾಲಕನೊಬ್ಬ ಪತ್ತೆಯಾಗಿದ್ದು, ಭಾರತೀಯ ಸೇನೆಗೆ ಒಪ್ಪಿಸುವ ಪ್ರಕ್ರಿಯೆ ನಡೆದಿದೆ ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ) ಹೇಳಿದೆ.
ಪಿಎಲ್‌ಎ ಈ ಕುರಿತ ಸಂದೇಶವನ್ನು ಸೇನೆಗೆ ರವಾನಿಸಿದೆ. ಪಿಎಲ್‌ಎಯ ಸಿಬ್ಬಂದಿ ಬಾಲಕನನ್ನು ಅಪಹರಿಸಿದ್ದಾರೆ ಎಂಬ ಸಂಸದರೊಬ್ಬರ ಹೇಳಿಕೆಯ ಹಿಂದೆಯೇ ಈ ಬೆಳವಣಿಗೆ ನಡೆದಿದೆ.
ಆದರೆ ಬಾಲಕನ ಗುರುತನ್ನು ಪಿಎಲ್‌ಎ ನೀಡಿಲ್ಲ. ಜನವರಿ 18ರಂದು ಸಿಯಾಂಗ್ ಜಿಲ್ಲೆಯಿಂದ ಪಿಎಲ್ಎ ಸಿಬ್ಬಂದಿ ಕರೆದೊಯ್ದಿದ್ದ ಮಿರಂ ತರೊನ್ ಇರಬಹುದು ಎಂದು ಅಂದಾಜಿಸಲಾಗಿದೆ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ.
ಘಟನೆ ಹಿಂದೆಯೇ ಭಾರತೀಯ ಸೇನೆಯು ಬಾಲಕನ ನೆಲೆ ಗುರುತಿಸಲು ಚೀನಾದ ನೆರವು ಕೋರಿತ್ತು. ಬಾಲಕನನ್ನು ಶೀಘ್ರವೇ ತನ್ನ ಸುಪರ್ದಿಗೆ ಪಡೆಯಲಾಗುವುದು ಎಂದು ಸೇನೆ ತಿಳಿಸಿದೆ.
ಅರುಣಾಚಲ ಪ್ರದೇಶದ ಸಂಸದ ತಪಿರ್ ಗಾವೊ ಅವರು, ‘ಬಾಲಕನು ಪಿಎಲ್‌ಎ ಸುಪರ್ದಿಯಲ್ಲಿದ್ದಾನೆ. ಶೀಘ್ರವೇ ಸೇನೆಗೆ ಒಪ್ಪಿಸಲಿದೆ’ ಎಂಬ ಮಾಹಿತಿಯನ್ನು ಸೇನೆ ನನಗೆ ನೀಡಿದೆ‘ ಎಂದು ತಿಳಿಸಿದರು.
ಜನವರಿ 19ರಂದು ಗಾವೊ ಅವರು, ಚೀನಾದ ಪಿಎಲ್‌ಎ ಸಿಬ್ಬಂದಿ ಸಿಯಾಂಗ್ ಜಿಲ್ಲೆಯ ಬಿಶಿಂಗ್ ಗ್ರಾಮದಿಂದ ಬಾಲಕನನ್ನು ಅಪಹರಿಸಲಾಗಿದೆ. ಬಾಲಕ ತರೊನ್‌ನ ಸ್ನೇಹಗಿತ ಜಾಹಿ ವೈಯಿಂಗ್ ಈ ಮಾಹಿತಿಯನ್ನು ಸಂಬಂಧಿತ ಅಧಿಕಾರಿಗಳಿಗೆ ನೀಡಿದ್ದನು. ಸಾಂಗ್‌ಪೊ ನದಿಯು ಭಾರತದ ಗಡಿ ಪ್ರವೇಶಿಸುವ ಅರುಣಾಚಲ ಪ್ರದೇಶದ ಗಡಿಯಲ್ಲಿ ಘಟನೆ ನಡೆದಿತ್ತು. ಈ ನದಿಯನ್ನು ಅಸ್ಸಾಂನಲ್ಲಿ ಬ್ರಹ್ಮಪುತ್ರ ಎಂದು ಗುರುತಿಸಲಾಗುತ್ತದೆ.
ಜ.20ರಂದು ಈ ಬಗ್ಗೆ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಸಚಿವಾಲಯ, ‘ಘಟನೆ ಕುರಿತು ನನಗೆ ಮಾಹಿತಿ ಇಲ್ಲ. ಪಿಎಲ್ಎ ಗಡಿಯಲ್ಲಿನ ಪರಿಸ್ಥಿತಿ ನಿಯಂತ್ರಿಸಲಿದ್ದು, ನಿಯಮಮೀರಿ ಪ್ರವೇಶಿಸಿದ್ದಲ್ಲಿ ಕ್ರಮಕೈಗೊಳ್ಳಲಿದೆ’ ಎಂದು ಹೇಳಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.