ನವದೆಹಲಿ: ಗಾಲ್ವನ್ ಕಣಿವೆಯ ಕೆಲವು ಪ್ರದೇಶಗಳಲ್ಲಿ ಬೀಡು ಬಿಟ್ಟಿದ್ದ ಚೀನಾದ ಸೈನಿಕರು ಟೆಂಟ್‌ಗಳನ್ನು ತೆರವು ಮಾಡುತ್ತಿದ್ದು, ಸೇನೆ ಅಲ್ಲಿಂದ ಹಿಂದೆ ಸರಿಯುತ್ತಿರುವುದರ ಸೂಚನೆಯಾಗಿದೆ’ ಎಂದು ಸರ್ಕಾರದ ಮೂಲಗಳು ಸೋಮವಾರ ತಿಳಿಸಿವೆ.
‘ಉಭಯ ರಾಷ್ಟ್ರಗಳ ಸೇನೆಗಳ ಕಮಾಂಡರ್ ಮಟ್ಟದಲ್ಲಿ ನಡೆದ ಒಪ್ಪಂದದ ಪ್ರಕಾರ ಚೀನಾದ ಸೇನೆಯು ಇಲ್ಲಿಂದ ಹಿಂದಕ್ಕೆ ಸರಿಯುತ್ತಿದೆ. ವೀಕ್ಷಣಾ ಕೇಂದ್ರ 14ರಲ್ಲಿ ಸ್ಥಾಪಿಸಿದ್ದ ಟೆಂಟ್ ಹಾಗೂ ಇತರ ನಿರ್ಮಾಣಗಳನ್ನು ತೆರವುಗೊಳಿಸುತ್ತಿದೆ. ಗೋಗ್ರಾ ಹಾಟ್‌ಸ್ಪ್ರಿಂಗ್ ಪ್ರದೇಶದಲ್ಲೂ ಇಂಥದ್ದೇ ಬೆಳವಣಿಗೆ ಕಾಣಿಸಿದೆ’ ಎಂದು ಮೂಲಗಳು ತಿಳಿಸಿವೆ.
ಗಾಲ್ವನ್ ಪ್ರದೇಶದಲ್ಲಿ ಜೂನ್ 15ರಂದು ನಡೆದ ಘರ್ಷಣೆಯಲ್ಲಿ ಭಾರತದ 20ಸೈನಿಕರು ಹುತಾತ್ಮರಾದ ನಂತರ ಪೂರ್ವ ಲಡಾಖ್‌ನ ಗಡಿಪ್ರದೇಶದ ಹಲವು ಕಡೆಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಭಾರತವು ಚೀನಾವನ್ನು ಒತ್ತಾಯಿಸುತ್ತಲೇ ಇದೆ.
ಕಳೆದ ಕೆಲವು ವಾರಗಳಿಂದ ಭಾರತ ಚೀನಾ ಮಧ್ಯೆ ಹಲವು ಸುತ್ತಿನ ರಾಜತಾಂತ್ರಿಕ ಮಾತುಕತೆಗಳು ನಡೆದಿದ್ದರೂ ಉದ್ವಿಗ್ನತೆ ಶಮನಗೊಳ್ಳುವ ಲಕ್ಷಣ ಕಂಡುಬಂದಿರಲಿಲ್ಲ. ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಎರಡೂ ರಾಷ್ಟ್ರಗಳು ನಿರಾಕರಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.