ADVERTISEMENT

ವೀಸಾ ಹಗರಣ: ಕಾರ್ತಿ ಚಿದಂಬರಂಗೆ ಕೋರ್ಟ್‌ ಸಮನ್ಸ್‌

ಪಿಟಿಐ
Published 19 ಮಾರ್ಚ್ 2024, 16:14 IST
Last Updated 19 ಮಾರ್ಚ್ 2024, 16:14 IST
ಕಾರ್ತಿ ಚಿದಂಬರಂ
ಕಾರ್ತಿ ಚಿದಂಬರಂ   

ನವದೆಹಲಿ: ಚೀನಿ ಪ್ರಜೆಗಳಿಗೆ ವೀಸಾ ಕೊಡಿಸಿದ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ ಮತ್ತು ಇತರರಿಗೆ ದೆಹಲಿಯ ನ್ಯಾಯಾಲಯ ಮಂಗಳವಾರ ಸಮನ್ಸ್‌ ಜಾರಿ ಮಾಡಿದೆ.

ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಂಡ ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್‌ ಅವರು ಈ ಸಮನ್ಸ್‌ ನೀಡಿದ್ದಾರೆ.

‘ಕಾರ್ತಿ ಚಿದಂಬರಂ ಮತ್ತು ಅವರ ಮಾಜಿ ಲೆಕ್ಕ ಪರಿಶೋಧಕರಾದ ಎಸ್‌. ಭಾಸ್ಕರರಾಮನ್‌ ಹಾಗೂ ಕೆಲವು ಕಂಪನಿಗಳ ಪ್ರತಿನಿಧಿಗಳು ಸೇರಿದಂತೆ ಇತರ ಆರು ಆರೋಪಿಗಳು ಏಪ್ರಿಲ್ 5ರೊಳಗಾಗಿ ನ್ಯಾಯಾಲಯದ ಮುಂದೆ ಹಾಜರಾಗಬೇಕು’ ಎಂದು ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ADVERTISEMENT

ಇ.ಡಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳಾದ ಪದಮ್‌ ದುಗಾರ್‌, ವಿಕಾಸ್‌ ಮಖಾರಿಯಾ, ಮನ್ಸೂರ್‌ ಸಿದ್ದಿಕಿ, ದುಗಾರ್‌ ಹೌಸಿಂಗ್‌ ಲಿಮಿಟೆಡ್‌, ಅಡ್ವಾಂಟೇಜ್‌ ಸ್ಟ್ರಾಟಜಿಕ್‌ ಕನ್ಸಲ್ಟಿಂಗ್‌ ಪ್ರೈವೆಟ್‌ ಲಿಮಿಟೆಡ್‌, ತಲ್ವಂಡಿ ಸಬೊ ಪವರ್‌ ಲಿಮಿಟೆಡ್‌ ಹೆಸರು ಸಹ ಇವೆ.

ಕಾರ್ತಿ ಅವರು ತಮ್ಮ ತಂದೆ ಪಿ.ಚಿದಂಬರಂ ಗೃಹ ಸಚಿವರಾಗಿದ್ದ ಅವಧಿಯಲ್ಲಿ (2011) ಚೀನಾದ 263 ಪ್ರಜೆಗಳಿಗೆ ವೀಸಾ ಕೊಡಿಸಲು ₹ 50 ಲಕ್ಷ ಲಂಚ ಪಡೆದಿದ್ದರು ಎಂಬ ಆರೋಪ ಸಂಬಂಧ ಕಾರ್ತಿ ಮತ್ತು ಇತರರ ವಿರುದ್ಧ ಇ.ಡಿಯು ಹಣ ಅಕ್ರಮ ವರ್ಗಾವಣೆ (ಪಿಎಂಎಲ್‌ಎ) ಪ್ರಕರಣ ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.