ನವದೆಹಲಿ: ನೇಪಾಳದ ಪ್ರಜೆಯಂತೆ ವೇಷ ಧರಿಸಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಹಿನ್ನೆಲೆಯಲ್ಲಿ ಚೀನಾ ಮೂಲದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರ ವಿಶೇಷ ತಂಡ, ದೆಹಲಿಯ ಮಜ್ನು-ಕಾ-ತಿಲಾ ಪ್ರದೇಶದಲ್ಲಿ ಮಹಿಳೆಯನ್ನು ವಶಕ್ಕೆ ಪಡೆದಿದೆ. ಬಂಧಿತ ಮಹಿಳೆಯನ್ನು ‘ಕೈ ರೂವೋ’ ಎಂದು ಗುರುತಿಸಲಾಗಿದೆ.
ನೇಪಾಳದ ನಕಲಿ ದಾಖಲೆಗಳನ್ನು ಹೊಂದಿದ್ದ ಕೈ ರೂವೋ, ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ಸಂಗತಿ ತನಿಖೆ ವೇಳೆ ದೃಢಪಟ್ಟಿದೆ ಎಂದು ಪೊಲೀದರು ತಿಳಿಸಿದ್ದಾರೆ.
ನೇಪಾಳದ ಕಠ್ಮಂಡುವಿನ ನಿವಾಸಿ ಡೊಲ್ಮಾ ಲಾಮಾ ಅವರ ಹೆಸರಿನಲ್ಲಿರುವ ನೇಪಾಳದ ಪೌರತ್ವ ಪ್ರಮಾಣಪತ್ರಗಳು ಕೈ ರೂವೋ ಬಳಿ ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2019ರಲ್ಲಿ ರೂವೋ ಚೀನಾದ ಪ್ರಜೆಯಾಗಿ ಭಾರತಕ್ಕೆ ಬಂದಿದ್ದಾರೆ ಎಂದು ವಿದೇಶಿ ಪ್ರಾದೇಶಿಕ ನೋಂದಣಿ ಕಚೇರಿಯನ್ನು (ಎಫ್‌ಆರ್‌ಆರ್‌ಒ) ತಿಳಿದಿದೆ.
ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ವಿದೇಶಿಯರ ಕಾಯಿದೆ ಅಡಿಯಲ್ಲಿ ರೂವೋ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.