ADVERTISEMENT

ಬಿಜೆಪಿ ನಾಯಕ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ವಿದ್ಯಾರ್ಥಿನಿ ಬಂಧನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 7:15 IST
Last Updated 25 ಸೆಪ್ಟೆಂಬರ್ 2019, 7:15 IST
ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ
ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ    

ನವದೆಹಲಿ: ಕೇಂದ್ರದ ಮಾಜಿ ಸಚಿವ, ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ವಿರುದ್ಧ ಅತ್ಯಾಚಾರ ಆರೋಪಮಾಡಿದ್ದ23ರ ಹರೆಯದ ಕಾನೂನು ವಿದ್ಯಾರ್ಥಿನಿಯನ್ನು ಬುಧವಾರ ಬಂಧಿಸಲಾಗಿದೆ.

ಈ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತಂಡವು ವಿದ್ಯಾರ್ಥಿನಿ ಮೇಲೆ ಹಣ ಸುಲಿಗೆ ಆರೋಪ ಹೊರಿಸಿ ಬಂಧಿಸಿದೆ. ಬಂಧನವನ್ನು ಪ್ರಶ್ನಿಸಿ ವಿದ್ಯಾರ್ಥಿನಿ ಸ್ಥಳೀಯ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರೂ ಪ್ರಯೋಜನವಾಗಲಿಲ್ಲ. ಪ್ರಕರಣದ ವಿಚಾರಣೆ ಬುಧವಾರ ನಡೆಯಲಿದೆ.

ವಿದ್ಯಾರ್ಥಿನಿಯನ್ನು ಮನೆಯಿಂದಲೇ ಬಂಧಿಸಿದ್ದು, ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ. ಇದಾದನಂತರ ಆಕೆಯನ್ನು ಮೆಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗುವುದು ಎಂದು ವಿಶೇಷ ತನಿಖಾ ತಂಡದ ಐಜಿಪಿ ನವೀನ್ ಅರೋರಾ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಕಳೆದ ವಾರ ಉತ್ತರಪ್ರದೇಶ ಪೊಲೀಸ್‌ ಇಲಾಖೆಯ ವಿಶೇಷ ತನಿಖಾ ತಂಡದವರು (ಎಸ್‌ಐಟಿ) ಶಹಜಹಾನ್‌ಪುರದಲ್ಲಿರುವ ಆಶ್ರಮದಿಂದ ಚಿನ್ಮಯಾನಂದ ಅವರನ್ನು ಬಂಧಿಸಿತ್ತು. ಇದಾದ ನಂತರ ಚಿನ್ಮಯಾನಂದ ಅವರಿಂದ ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿತ್ತು.

ಈ ರೀತಿ ಬಂಧನಕ್ಕೊಳಗಾದ ಆರೋಪಿ ಸಂಜಯ್ ಸಿಂಗ್ ಜತೆ ಕಾನೂನು ವಿದ್ಯಾರ್ಥಿನಿ ನಿರಂತರ ಸಂಪರ್ಕ ಹೊಂದಿದ್ದಾಳೆ ಎಂದು ಹೇಳಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಇವರಿಬ್ಬರ ನಡುವೆ 4,200 ಫೋನ್ ಕರೆಗಳು ದಾಖಲಾಗಿವೆ ಎಂದು ವಿಶೇಷ ತಂಡ ಹೇಳಿದೆ.

ಇದನ್ನೂ ಓದಿ:ಸಂತ್ರಸ್ತ ಯುವತಿಗೆ ‘ಸುಪ್ರೀಂ’ ಅಭಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.