ADVERTISEMENT

ಪಾಸ್ವಾನ್ ಜನ್ಮದಿನಾಚರಣೆಗೆ ಮೋದಿ, ಶಾ, ಸೋನಿಯಾರನ್ನು ಆಹ್ವಾನಿಸಿದ ಚಿರಾಗ್‌ 

ಪಿಟಿಐ
Published 7 ಸೆಪ್ಟೆಂಬರ್ 2021, 15:55 IST
Last Updated 7 ಸೆಪ್ಟೆಂಬರ್ 2021, 15:55 IST
ನರೇಂದ್ರ ಮೋದಿ, ಅಮಿತ್‌ ಶಾ, ಸೋನಿಯಾ ಗಾಂಧಿ
ನರೇಂದ್ರ ಮೋದಿ, ಅಮಿತ್‌ ಶಾ, ಸೋನಿಯಾ ಗಾಂಧಿ    

ಪಟ್ನಾ: ದಿವಂಗತ ರಾಮವಿಲಾಸ್‌ ಪಾಸ್ವಾನ್‌ ಅವರ ಜನ್ಮ ದಿನಾಚರಣೆ ಅಂಗವಾಗಿ ಸೆ. 12ರಂದುಪಾಟ್ನಾದಲ್ಲಿ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಬೃಹತ್‌ ಕಾರ್ಯಕ್ರಮ ಆಯೋಜಿಸಿದ್ದಾರೆ.

ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ರಾಷ್ಟ್ರ ಮಟ್ಟದ ಉನ್ನತ ನಾಯಕರನ್ನು ಆಹ್ವಾನಿಸಿರುವುದಾಗಿ ಎಲ್‌ಜೆಪಿ ನಾಯಕ ಚಿರಾಗ್‌ ಪಾಸ್ವಾನ್‌ ಮಂಗಳವಾರ ತಿಳಿಸಿದ್ದಾರೆ.

ತನ್ನ ಚಿಕ್ಕಪ್ಪ ಮತ್ತು ಕೇಂದ್ರ ಸಚಿವ ಪಶುಪತಿ ಕುಮಾರ್ ಪರಾಸ್ ಜೊತೆ ನಾಯಕತ್ವದ ವಿವಾದದಲ್ಲಿ ಸಿಲುಕಿರುವ ಈ ಸಮಯದಲ್ಲಿ ಚಿರಾಗ್‌ ಪಾಸ್ವಾನ್‌ ಅರಿಗೆ ತಮ್ಮ ತಂದೆಯ ವರ್ಚಸ್ಸನ್ನು ದಕ್ಕಿಸಿಕೊಳ್ಳಲು ಈ ಸಮಾವೇಶವು ರಾಜಕೀಯವಾಗಿ ಮಹತ್ವದ್ದಾಗಿದೆ.

ADVERTISEMENT

ಗಮನಿಸಬೇಕಾದ ಅಂಶವೆಂದರೆ, ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಲುವಾಗಿ ಚಿರಾಗ್‌ ಪಾಸ್ವಾನ್‌ ಅವರು ಪರಾಸ್‌ ಅವರ ನಿವಾಸಕ್ಕೂ ಭೇಟಿ ನೀಡಿದ್ದರು.

ಸಮಾವೇಶದ ಕುರಿತು ಮಾತನಾಡುವಾಗಲೇ, ರಾಮವಿಲಾಸ ಪಾಸ್ವಾನರ ದೆಹಲಿ ನಿವಾಸದ ಕುರಿತ ಊಹಾಪೋಹಗಳನ್ನು ನಿರಾಕರಿಸಿದರು. ರಾಮ ವಿಲಾಸ ಪಾಸ್ವಾನ್‌ ಅವರು ದೆಹಲಿಯಲ್ಲಿ ಮೂರು ದಶಕಗಳಿಂದ ಹೊಂದಿದ್ದ ನಿವಾಸವನ್ನು, ಅವರ ಪ್ರತಿಮೆ ಸ್ಥಾಪನೆ ಮೂಲಕ ವಶಕ್ಕೆ ಪಡೆಯಲು ಎಲ್‌ಜೆಪಿ ಪ್ರಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಚಿರಾಗ್‌, ಒಬ್ಬ ಸಂಸದನಾಗಿ ನಾನು ಅಂತ ಕಾನೂನು ಬಾಹಿರ ಕೆಲಸಕ್ಕೆ ಕೈ ಹಾಕಲಾರೆ. ಅದು ಅತಿಕ್ರಮಣಕ್ಕೆ ಸಮಾನವಾದ ಅಪರಾಧ ಎಂದು ಅವರು ಹೇಳಿದ್ದಾರೆ.

ಸೆಪ್ಟೆಂಬರ್ 12ರ ಕಾರ್ಯಕ್ರಮಕ್ಕೆ ಬರುವಂತೆ ಮೋದಿ ಮತ್ತು ಶಾ ಅವರೊಂದಿಗೆ ಮಾತನಾಡಲಾಗಿದೆ ಎಂದುಚಿರಾಗ್ ಪಾಸ್ವಾನ್ ತಿಳಿಸಿದರು. ಅಲ್ಲದೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿರುವುದಾಗಿ ಹೇಳಿದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದಾಗ್ಯೂ ಅವರನ್ನು ಕಾರ್ಯಕ್ರಮಕ್ಕೆ ಆ‌ಹ್ವಾನಿಸಲಾಗಿದೆ. ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಅವರನ್ನೂ ಕರೆಯಲಾಗಿದೆ.

ರಾಮ್ ವಿಲಾಸ್ ಪಾಸ್ವಾನ್ ನಿಧನರಾದ ಅಕ್ಟೋಬರ್ 8ರಂದುವಾರ್ಷಿಕೋತ್ಸವ ಆಯೋಜಿಸಲು ಪರಾಸ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದ್ದು, ರಾಷ್ಟ್ರೀಯ ನಾಯಕರನ್ನು ಆಹ್ವಾನಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.