ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ಕೋಲ್ಕತ್ತ ಪೊಲೀಸ್ ಕಮಿಷನರ್ ಈ ಮೂವರೂ ಖುದ್ದು ನ್ಯಾಯಾಲಯಕ್ಕೆ ಹಾಜರಾಗದೆಶಾರದಾ ಚಿಟ್‌ಫಂಡ್ ಹಗರಣದ ವಿಚಾರಣೆ ಸಂಬಂಧ ಯಾವುದೇ ತೀರ್ಪು ನೀಡದಿರಲು ಸುಪ್ರೀಂಕೋರ್ಟ್ ಮಂಗಳವಾರ ನಿರ್ಧರಿಸಿದೆ.
‘ನಾವು ಯಾವುದೇ ತೀರ್ಪು ನೀಡುವುದಿಲ್ಲ. ವಿಚಾರಣೆಯನ್ನು ನಾಳೆ ಕೈಗೆತ್ತಿಕೊಳ್ಳುತ್ತೇವೆ’ ಎಂದು ನ್ಯಾಯಮೂರ್ತಿಗಳಾದ ಎಲ್.ಎನ್.ರಾವ್ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡಿರುವ ನ್ಯಾಯಪೀಠ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ನೇತೃತ್ವದ ಪೀಠದ ಮುಂದೆ ಈ ಪ್ರಕರಣವು ಬುಧವಾರ ವಿಚಾರಣೆಗೆ ಬರಲಿದೆ.
ಫೆಬ್ರುವರಿ 5ರಂದು ನೀಡಿದ ಆದೇಶದಲ್ಲಿ ಸುಪ್ರೀಂ ಕೋರ್ಟ್, ಪ್ರಕರಣವು ತೀರ್ಪು ನೀಡುವ ಪಟ್ಟಿಯಲ್ಲಿದೆ. ಅದಕ್ಕೂ ಮೊದಲು ಮುಖ್ಯಕಾರ್ಯದರ್ಶಿ ಮಲಯ್ ಕುಮಾರ್ ದೇ, ಡಿಜಿಪಿ ವೀರೇಂದ್ರ ಕುಮಾರ್ ಮತ್ತು ಕೋಲ್ಕತ್ತಾ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ಇದೇ ಫೆಬ್ರುವರಿ 20ಕ್ಕೂ ಮೊದಲು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ಸೂಚಿಸಿತ್ತು. ಈ ಮೂವರೂ ಸೋಮವಾರವಷ್ಟೇ ನ್ಯಾಯಾಲಯಕ್ಕೆ ಖುದ್ದು ಹಾಜರಿ ಬಗ್ಗೆ ಅಫಿಡವಿಟ್ ಸಲ್ಲಿಸಿದ್ದರು.
ಶಾರದಾ ಚಿಟ್‌ಫಂಡ್ ಹಗರಣದಲ್ಲಿ ಈ ಮೂವರು ಅಧಿಕಾರಿಗಳು ಸಿಬಿಐ ತನಿಖೆಗೆ ತಡೆಯೊಡ್ಡಿದ್ದಾರೆ. ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ನಾಶಗೊಳಿಸಿದ್ದಾರೆ ಎಂದು ಸಿಬಿಐ ಮಾಡಿರುವ ಆರೋಪದ ಮೇಲೆ ಮೂವರಿಗೂ ಫೆ.5ರಂದು ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದೆ.
**
ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ, ಡಿಜಿಪಿ ಹಾಗೂ ಕೋಲ್ಕತ್ತ ಪೊಲೀಸ್ ಕಮಿಷನರ್ ಈ ಮೂವರೂ ಖುದ್ದು ನ್ಯಾಯಾಲಯಕ್ಕೆ ಹಾಜರಾಗದೆ ಶಾರದಾ ಚಿಟ್‌ಫಂಡ್ ಹಗರಣದ ವಿಚಾರಣೆ ಸಂಬಂಧ ಯಾವುದೇ ತೀರ್ಪು ನೀಡದಿರಲು ಸುಪ್ರೀಂಕೋರ್ಟ್ ಮಂಗಳವಾರ ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.