ADVERTISEMENT

ಚೋಕ್ಸಿ ಹಸ್ತಾಂತರಿಸಲು ಆ್ಯಂಟಿಗುವಾಕ್ಕೆ ಭಾರತ ಮನವಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2018, 14:30 IST
Last Updated 5 ಆಗಸ್ಟ್ 2018, 14:30 IST
   

ನವದೆಹಲಿ (ಪಿಟಿಐ): ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ (ಪಿಎನ್‌ಬಿ) ₹13 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ಉದ್ಯಮಿ ಮೆಹುಲ್‌ ಚೋಕ್ಸಿಯನ್ನು ಹಸ್ತಾಂತರಿಸುವಂತೆ ಭಾರತವು ಆ್ಯಂಟಿಗುವಾ ರಾಷ್ಟ್ರಕ್ಕೆ ಮನವಿ ಮಾಡಿದೆ.

ಆ್ಯಂಟಿಗುವಾ ಪೌರತ್ವ ಮತ್ತು ಪಾಸ್‌ಪೋರ್ಟ್‌ ಪಡೆದಿರುವ ಚೋಕ್ಸಿ ಆ ದೇಶದಲ್ಲೇ ನೆಲೆಸಿರುವುದು ಖಚಿತಪಟ್ಟಿದೆ. ಚೋಕ್ಸಿಯನ್ನು ಭಾರತಕ್ಕೆ ಕರೆತರಲು ರಾಜತಾಂತ್ರಿಕ ಪ್ರಯತ್ನ ಆರಂಭಿಸಲಾಗಿದೆ. ಇದಕ್ಕಾಗಿ ತನಿಖಾ ತಂಡವೊಂದನ್ನು ಕೆಲ ದಿನಗಳ ಹಿಂದೆಯೇ ಆ ದೇಶಕ್ಕೆ ಕಳುಹಿಸಲಾಗಿದೆ. ಆ ರಾಷ್ಟ್ರದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳನ್ನು ತನಿಖಾ ತಂಡ ಶುಕ್ರವಾರ ಭೇಟಿ ಮಾಡಿದೆ. ಚೋಕ್ಸಿ ಬಂಧಿಸಿ, ಹಸ್ತಾಂತರಿಸುವಂತೆಯೂ ಮನವಿ ಮಾಡಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೆಹುಲ್‌ ಚೋಕ್ಸಿಯು ಪಿಎನ್‌ಬಿ ಹಗರಣದ ಪ್ರಮುಖ ರೂವಾರಿ, ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಅವರ ಚಿಕ್ಕಪ್ಪ. ಈ ಹಗರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸುವ ಮೊದಲೇ ಚೋಕ್ಸಿ ಮತ್ತು ನೀರವ್‌ ಮೋದಿ ಜನವರಿಯಲ್ಲಿ ದೇಶದಿಂದ ಪರಾರಿಯಾಗಿದ್ದರು. ಚೋಕ್ಸಿ 2017ರಲ್ಲಿ ಕೆರೆಬಿಯನ್‌ ದ್ವೀಪ ರಾಷ್ಟ್ರದ ಪೌರತ್ವ ಪಡೆದಿದ್ದಾನೆ. ಆ ದೇಶದ ಪಾಸ್‌ಪೋರ್ಟ್‌ ಬಳಸಿ 130ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಆತ ಮುಕ್ತವಾಗಿ ಸಂಚರಿಸಬಹುದಾಗಿದೆ.

ADVERTISEMENT

ಕ್ಲೀನ್ ಚಿಟ್‌ ನೀಡಿಲ್ಲ–ಸೆಬಿ ಸ್ಪಷ್ಟನೆ:ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿಗೆ ಸೆಬಿ (ಭಾರತೀಯ ಷೇರು ನಿಯಂತ್ರಣ ಮಂಡಳಿ) ಕ್ಲೀನ್‌ಚಿಟ್‌ (ನಿರ್ದೋಷಿಗಳು) ನೀಡಿಲ್ಲ. ಇಬ್ಬರ ವಿರುದ್ಧದ ತನಿಖೆ ಮುಂದುವರಿದಿದೆ ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಚೋಕ್ಸಿಗೆ ಆ್ಯಂಟಿಗುವಾ ಪೌರತ್ವ ನೀಡಿರುವುದನ್ನು ಪ್ರಶ್ನಿಸಿ ನೋಟಿಸ್‌ ನೀಡಲು ಸೆಬಿ ತೀರ್ಮಾನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಚೋಕ್ಸಿಯ ಆ್ಯಂಟಿಗುವಾ ಪೌರತ್ವಕ್ಕೆ ಸಂಬಂಧಿಸಿದಂತೆ ಸಿಟಿಜನ್‌ಶಿಪ್‌ ಬೈ ಇನ್ವೆಸ್ಟ್‌ಮೆಂಟ್‌ ಯುನಿಟ್‌ನಿಂದ (ಸಿಐಯು) ಯಾವುದೇ ಮನವಿ ಬಂದಿರಲಿಲ್ಲ. ನಾವು ಯಾವುದೇ ಪ್ರತಿಕ್ರಿಯೆಯನ್ನೂ ಸಿಐಯುಗೆ ನೀಡಿಲ್ಲ’ ಎಂದು ಸೆಬಿ ಶುಕ್ರವಾರ ಸ್ಪಷ್ಟಪಡಿಸಿತ್ತು. ಆದರೆ ಆ ರಾಷ್ಟ್ರದ ಅಧಿಕಾರಿಗಳು ಭಾರತದಿಂದ ನಿರಾಕ್ಷೇಪಣಾ ಪತ್ರ ಬಂದ ನಂತರವೇ ಚೋಕ್ಸಿಗೆ ಪೌರತ್ವ ನೀಡಲಾಗಿದೆ ಎಂದು ಹೇಳಿದ್ದಾರೆ.

ಸೆಬಿ, ಪಾಸ್‌ಪೋರ್ಟ್‌ ಕಚೇರಿ, ಪೊಲೀಸ್‌ ಇಲಾಖೆ ಸೇರಿದಂತೆ ಭಾರತದ ಯಾವುದೇ ಇಲಾಖೆಯಿಂದ ನಕರಾತ್ಮಕ ವರದಿ ಬಂದಿರಲಿಲ್ಲ. ಇದೆಲ್ಲ ಪರಿಗಣಿಸಿಯೇ ಚೋಕ್ಸಿಗೆ ಕಳೆದ ವರ್ಷ ಇಲ್ಲಿನ ನಾಗರಿಕತ್ವ ನೀಡಲಾಗಿದೆ ಎಂದು ಸಿಐಯು ನೀಡಿದ್ದ ಹೇಳಿಕೆ ಉಲ್ಲೇಖಿಸಿ ಕಳೆದ ವಾರ ದ್ವೀಪರಾಷ್ಟ್ರದ ಮಾಧ್ಯಮಗಳು ವರದಿ ಮಾಡಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.