ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣದಲ್ಲಿ ಮಧ್ಯವರ್ತಿಯಾಗಿದ್ದ ಆರೋಪಿ ರಾಜೀವ್ ಸಕ್ಸೇನಾ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಒಪ್ಪಿಕೊಂಡಿರುವುದಕ್ಕೆ ಯಾವುದೇ ಆಕ್ಷೇಪಣೆ ಇಲ್ಲವೆಂದು ಜಾರಿ ನಿರ್ದೇಶನಾಲಯ(ಇಡಿ) ದೆಹಲಿ ಹೈಕೋರ್ಟ್‌ಗೆ ಗುರುವಾರ ತಿಳಿಸಿದೆ.
ಸಕ್ಸೇನಾ ಮಾಫಿ ಸಾಕ್ಷಿಯಾಗಿರುವುದರಿಂದ ಪ್ರಕರಣದ ತನಿಖೆ ಸುಲಭವಾಗಲಿದೆ ಎಂದು ತನಿಖಾ ಸಂಸ್ಥೆಯು ವಿಶೇಷ ನ್ಯಾಯಾಧೀಶ ಅರವಿಂದ್ ಕುಮಾರ್ ಅವರು ಎದುರು ಹೇಳಿಕೆ ದಾಖಲಿಸಿದೆ. ಈ ವಿಚಾರವನ್ನು ಇದೇ 25ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಕೋರ್ಟ್ ಹೇಳಿದೆ.
ಮಾರ್ಚ್ 6ರಂದು ನಡೆದ ಗೋಪ್ಯ ವಿಚಾರಣೆಯಲ್ಲಿ ಸಕ್ಸೇನಾ ಮಾಫಿ ಸಾಕ್ಷಿಯಾಗಲು ಒಪ್ಪಿಗೆ ನೀಡಿದ್ದು, ವಿಚಾರಣೆ ವೇಳೆ ನೀಡಿದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಇದರ ಪ್ರತಿಯನ್ನು ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಧೀಶರಿಗೂ ಕೋರ್ಟ್ ಕಳುಹಿಸಿಕೊಟ್ಟಿದೆ.
ಇದಕ್ಕೂ ಮೊದಲು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸಕ್ಷೇನಾ ಆರೋಗ್ಯ ಕುರಿತು ನೀಡಿದ ವೈದ್ಯಕೀಯ ವರದಿ ಆಧರಿಸಿ ಸಕ್ಷೇನಾಗೆ ಕೋರ್ಟ್ ಜಾಮೀನು ನೀಡಿತ್ತು.
₹3,600 ಕೋಟಿಯ ಅಗಸ್ಟಾ ವೆಸ್ಟ್‌ಲ್ಯಾಂಡ್‌ವಿವಿಐಪಿ ಹೆಲಿಕಾಪ್ಟರ್‌ಗಳ ಖರೀದಿ ಹಗರಣ ಸಂಬಂಧ ಇ.ಡಿ, ಕೋರ್ಟ್‌ಗೆ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ರಾಜೀವ್ ಸಕ್ಸೇನಾ ಕೂಡ ಆರೋಪಿ. ಈತ ದುಬೈ ಮೂಲದ ಯುಎಚ್‌ವೈ ಸಕ್ಸೇನಾ ಮತ್ತು ಮ್ಯಾಟ್ರಿಕ್ಸ್ ಹೋಲ್ಡಿಂಗ್ ಕಂಪನಿಗಳ ನಿರ್ದೇಶಕ.
ಪ್ರಮುಖ ಆರೋಪಿ ಕ್ರಿಶ್ಚಿಯನ್ ಮಿಷೆಲ್, ಅಗಸ್ಟಾವೆಸ್ಟ್ ಲ್ಯಾಂಡ್ ಮತ್ತು ಫಿನ್‌ಮೆಕ್ಯಾನಿಕ ಮಾಜಿ ನಿರ್ದೇಶಕರಾದ ಗೈಸೆಪೆ ಒರ್ಸಿ, ಬ್ರುನೊ ಸ್ಪಗ್ನೊಲಿನಿ, ವಾಯುಪಡೆಯ ನಿವೃತ್ತ ಮುಖ್ಯಸ್ಥ ಎಸ್.ಪಿ. ತ್ಯಾಗಿ ಹಾಗೂ ಸಕ್ಸೇನಾ ಪತ್ನಿ ಶಿವಾನಿ ಅವರ ಹೆಸರುಗಳೂ ದೋಷಾರೋಪ ಪಟ್ಟಿಯಲ್ಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.