ತಿರುವನಂತಪುರ:ಸ್ತ್ರೀಯರನ್ನು ಸುರಕ್ಷಿತವಾಗಿ ಶಬರಿಮಲೆ ದೇಗುಲಕ್ಕೆ ಕಳುಹಿಸಿಕೊಡಲು ಹೆಲಿಕಾಪ್ಟರ್‌ಗಳನ್ನು ಬಳಸಲು ಕೇರಳ ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
‘ಮಂಡಲಂ–ಮಕರವಿಳಕ್ಕು’ ಅವಧಿಯ ಪೂಜೆಗಾಗಿ ಇದೇ 17ರಂದುಶಬರಿಮಲೆ ಅಯ್ಯಪ್ಪ ದೇವಸ್ಥಾನದ ಬಾಗಿಲು ತೆರೆಯಲಾಗುತ್ತಿದೆ. ನಂತರ 41 ದಿನಗಳ ಕಾಲ ಕ್ಷೇತ್ರ ಭಕ್ತರ ದರ್ಶನಕ್ಕೆ ತೆರೆದಿರಲಿದೆ. ಈ ವೇಳೆ ದೇಗುಲಕ್ಕೆ ಭೇಟಿ ನೀಡಲು ನೂರಾರು ಮಹಿಳೆಯರು ಆಸಕ್ತಿ ತೋರಿದ್ದಾರೆ. ಆದರೆ, ‘ಶಬರಿಮಲೆ ರಕ್ಷಿಸಿ’ ಅಭಿಯಾನದಡಿ ಪ್ರತಿಭಟನೆ ನಡೆಸುತ್ತಿರುವವರಿಂದ ಅವರಿಗೆ ತಡೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕೊಚ್ಚಿ ಮತ್ತು ತಿರುವನಂತಪುರದಿಂದ ತೆರಳುವ ಮಹಿಳೆಯರನ್ನು ಸುರಕ್ಷಿತವಾಗಿ ದೇಗುಲಕ್ಕೆ ತಲುಪಿಸಲು ಹೆಲಿಕಾಪ್ಟರ್ ಬಳಸುವ ಸಾಧ್ಯತೆ ಬಗ್ಗೆ ಪೊಲೀಸರು ಚಿಂತನೆ ನಡೆಸುತ್ತಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.
ಸದ್ಯ ತುರ್ತು ಸನ್ನಿವೇಶಗಳಲ್ಲಿ ಭಕ್ತರ ರಕ್ಷಣೆಗೆ ಮಾತ್ರ ಶಬರಿಮಲೆಯಲ್ಲಿ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. 1980ರಲ್ಲಿ ನಿರ್ಮಿಸಲಾಗಿರುವ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ಗಳನ್ನು ಇಳಿಸಬೇಕಿದ್ದರೂ ಅರಣ್ಯ ಇಲಾಖೆಯ ಅನುಮತಿ ಬೇಕು ಎಂದು ಮೂಲಗಳು ತಿಳಿಸಿವೆ. ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿಯವರ ಭೇಟಿಗಾಗಿ ಅಲ್ಲಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಆದರೆ, ನಂತರ ಅವರ ಭೇಟಿ ರದ್ದಾಗಿತ್ತು.
ಇದೇ 13ಕ್ಕೆ ಮರುಪರಿಶೀಲನಾ ಅರ್ಜಿ ವಿಚಾರಣೆ
ಎಲ್ಲ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಅವಕಾಶ ನೀಡಿರುವ ತೀರ್ಪು ಪ್ರಶ್ನಿಸಿ ಎರಡು ಮರುಪರಿಶೀಲನಾ ಅರ್ಜಿಗಳುಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದು, ಇದೇ 13ಕ್ಕೆ ವಿಚಾರಣೆಗೆ ಬರಲಿದೆ. ವಿಚಾರಣೆ ವೇಳೆ ನ್ಯಾಯಾಲಯವು ಹಳೆಯ ತೀರ್ಪನ್ನೇ ಎತ್ತಿಹಿಡಿದಲ್ಲಿ ಮಹಿಳೆಯರ ದೇಗುಲ ಪ್ರವೇಶಕ್ಕೆ ತಡೆಯೊಡ್ಡುವವರಿಗೆ ಹಿನ್ನಡೆಯಾಗಲಿದೆ.
539 ಸ್ತ್ರೀಯರಿಂದ ಹೆಸರು ನೋಂದಾವಣೆ
‘ಮಂಡಲಂ–ಮಕರವಿಳಕ್ಕು’ ಅವಧಿಯ ಪೂಜೆ ವೇಳೆ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಋತುಮತಿಯಾಗುವ ವಯಸ್ಸಿನ 539 ಮಹಿಳೆಯರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳ ಹೇಳಿಕೆ ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
‘ಅಕ್ಟೋಬರ್ 30 ರಿಂದ ಪೊಲೀಸ್ ಇಲಾಖೆಯ ಆನ್‌ಲೈನ್ ಪೋರ್ಟ್‌ಲ್‌ನಲ್ಲಿ ಈ ಮಹಿಳೆಯರು ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. www.sabarimalaq.com ಪೋರ್ಟ್‌ಲ್‌ನ್ನು ಶುಕ್ರವಾರ ಪರಿಶೀಲಿಸಿದಾಗ 10 ರಿಂದ 50 ವರ್ಷದೊಳಗಿನ 539 ಮಹಿಳೆಯರು ಹೆಸರು ನೋಂದಾಯಿಸಿಕೊಂಡಿರುವುದು ಗೊತ್ತಾಗಿದೆ’ ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಮಧ್ಯೆ, ಹೆಸರು ನೋಂದಾಯಿಸಲು ₹10 ಶುಲ್ಕ ನಿಗದಿ ಮಾಡುವಂತೆ ಕೋರಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈವರೆಗೂ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಅಯ್ಯಪ್ಪ ಧರ್ಮ ರಕ್ಷಾ ಸಮಿತಿಯು 41 ದಿನಗಳವರೆಗೆ ನಡೆಯುವ ವಾರ್ಷಿಕ ಪೂಜಾ ಕಾರ್ಯಕ್ರಮದ ಸಮಯದಲ್ಲಿ ಏಳು ರಾಜ್ಯಗಳ ಐದು ಕೋಟಿ ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ಅಯ್ಯಪ್ಪ ದೇವಸ್ಥಾನದ ಹಕ್ಕುಗಳನ್ನು ರಕ್ಷಿಸುವ ಅಭಿಯಾನ ನಡೆಸಲು ನಿರ್ಧರಿಸಿದೆ.
ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಶಬರಿಮಲೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಹಿಳೆಯರ ಪ್ರವೇಶಕ್ಕೆ ಭಕ್ತರು ಅವಕಾಶ ನೀಡಿರಲಿಲ್ಲ. ನವೆಂಬರ್ 6 ರಂದು 200 ಮಂದಿ ಭಕ್ತರು ಮಹಿಳೆಯೊಬ್ಬರ ಪ್ರವೇಶವನ್ನು ತಡೆಯಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಮಲಯಾಳ ಸುದ್ದಿ ವಾಹಿನಿಯೊಂದರ ಕ್ಯಾಮರಾಮನ್ ಮೇಲೂ ಹಲ್ಲೆ ನಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.