ದರ್‌ಭಂಗಾ: ಭಯೋತ್ಪಾದನೆ ಮತ್ತು ದೇಶದ ಭದ್ರತೆ ಇವೆರಡು ವಿಪಕ್ಷಗಳಿಗೆ ವಿಷಯವೇ ಅಲ್ಲ.ಹಾಗಾಗಿ ಅವರು ಈ ಬಗ್ಗೆ ಚರ್ಚೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಹಾರದ ದರ್‌ಭಂಗಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾಷಣವನ್ನು ಮೈಥಿಲಿಭಾಷೆಯಲ್ಲಿಯೇ ಆರಂಭಿಸಿದ್ದಾರೆ.ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ನಡೆದ ಭಾರತದ ವಾಯುದಾಳಿ ಬಗ್ಗೆ ವಿಪಕ್ಷಗಳು ಮಾಡಿರುವ ಟೀಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾನು ಯಾಕೆ ಭಯೋತ್ಪಾದನೆ ವಿರುದ್ಧ ಮಾತನಾಡುತ್ತೇನೆ ಎಂದು ಅವರು ಪ್ರಶ್ನಿಸುತ್ತಾರೆ.ಅದೊಂದು ಸಮಸ್ಯೆ ಅಲ್ಲ ಅಂತಾರೆ ಅವರು.ನೀವೇ ಹೇಳಿ ದೇಶದ ಭದ್ರತೆ ಮತ್ತು ಭಯೋತ್ಪಾದನೆ ವಿಷಯ ಅಲ್ಲವೇ? ನೀವು ಅರ್ಥ ಮಾಡಿಕೊಂಡಷ್ಟು ಅವರು ಅರ್ಥ ಮಾಡಿಕೊಂಡಿಲ್ಲ. ಶ್ರೀಲಂಕಾದಲ್ಲಿ ನಡೆದ ದಾಳಿಯಲ್ಲಿ 350ಕ್ಕಿಂತಲೂ ಹೆಚ್ಚು ಮಂದಿ ಸತ್ತಿದ್ದಾರೆ. ಅದೊಂದು ವಿಷಯ ಅಲ್ಲವೇ?
300 ಸೀಟುಗಳಿಗಾಗಿ ಮೂರನೇ ಹಂತದ ಮತದಾನ ಮುಗಿದಾಗ ವಾಯುದಾಳಿ ಬಗ್ಗೆ ಸಾಕ್ಷ್ಯ ಕೇಳುತ್ತಿರುವವರು ಮಾಯವಾದರು.ಅವರು ಈಗ ಇವಿಎಂ ಮತ್ತು ಮೋದಿಯನ್ನು ಬೈಯುತ್ತಿದ್ದಾರೆ, ಈ ದೇಶದೊಂದಿಗೆ ಸಂಬಂಧ ಇಲ್ಲದವರಿಗೆ ದೇಶದ ಭಾವನೆಗಳು ಅರ್ಥವಾಗಲ್ಲ ಎಂದಿದ್ದಾರೆ ಮೋದಿ.
ಭಯೋತ್ಪಾದನೆ ಬಡವರ ಮೇಲೆ ಹೆಚ್ಚು ಪರಿಣಾಮ ಬೀರಿದೆ.40 ವರ್ಷಗಳ ಹಿಂದೆ ಎಲ್ಲರೂ ಸಾಮಾನ್ಯ ಬದುಕು ಸಾಗಿಸುತ್ತಿದ್ದರು, ಅವರಲ್ಲಿರುವ ಹಣವನ್ನು ಬಡವರಿಗಾಗಿ, ಶಾಲೆ, ಆಸ್ಪತ್ರೆ ನಿರ್ಮಾಣಕ್ಕಾಗಿ ಬಳಸುತ್ತಿದ್ದರು. ಆದರೆ ಈಗ ಹಣ ಬಾಂಬ್ ಮತ್ತು ಗನ್ ಖರೀದಿಗೆ ಬಳಕೆಯಾಗುತ್ತದೆ.
ಏನಾದರೂ ಸಂಭವಿಸಿ ಅದಕ್ಕೆ ಭದ್ರತಾ ಸಿಬ್ಬಂದಿಗಳನ್ನು ದೂರಿದರೆ ಅವರಿಗೆ ನಿದ್ದೆ ಹತ್ತಲಾರದು.ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದು ಅತ್ಯಗತ್ಯ. ಇದು ಹೊಸ ಭಾರತ. ನಾವು ಭಯೋತ್ಪಾದನೆ ವಿರುದ್ಧ ಹೋರಾಡಿ ಅದನ್ನು ನಿರ್ಮೂಲನೆ ಮಾಡುತ್ತೇವೆ.ನಿಮ್ಮ ಈ ಚೌಕೀದಾರ್ ದಿನಾ ಎಚ್ಚರವಾಗಿರುತ್ತಾನೆ. ಎಲ್ಲ ಉಗ್ರರನ್ನು ಸೆರೆ ಹಿಡಿಯಲಾಗುವುದು. ಭಯೋತ್ಪಾದನೆ ವಿರುದ್ಧ ಹೋರಾಡಿ ಗೆಲ್ಲಲು ಈ ಚೌಕೀದಾರ್‌ಗೆ ನಿಮ್ಮ ಮತ ಬೇಕು ಎಂದು ಮೋದಿ ಮತಯಾಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.