ADVERTISEMENT

ಅಗಸ್ಟಾ ವೆಸ್ಟ್ ಲ್ಯಾಂಡ್: ಸೇನಾ ಜ್ಞಾನವೇ ಮಿಷೆಲ್‌ ಶಕ್ತಿ

ಪಿಟಿಐ
Published 5 ಡಿಸೆಂಬರ್ 2018, 20:05 IST
Last Updated 5 ಡಿಸೆಂಬರ್ 2018, 20:05 IST
   

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಗಣ್ಯರ ಹೆಲಿಕಾಪ್ಟರ್‌ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ಗೆ ಭಾರತೀಯ ಸೇನೆ ಬಗ್ಗೆ ಅಪಾರ ಜ್ಞಾನವಿತ್ತು ಎಂದು ಸಿಬಿಐ ಹೇಳಿದೆ.

ಬ್ರಿಟನ್‌ನ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಸಂಸ್ಥೆಯಲ್ಲಿ ಸಲಹೆಗಾರನಾಗಿದ್ದ ಮಿಷೆಲ್‌ಗೆ ವಿಮಾನ, ಹೆಲಿಕಾಪ್ಟರ್‌ನಂತಹ ವೈಮಾನಿಕ ಉಪಕರಣಗಳ ಬಗ್ಗೆ ಅಪಾರ ತಾಂತ್ರಿಕ ಅರಿವು ಇತ್ತು.

ಇನ್ನಿಬ್ಬರು ಮಧ್ಯವರ್ತಿಗಳಾದ ರಾಲ್ಫ್‌ ಗೈಡೊ ಹ್ಯಾಶ್‌ ಮತ್ತು ಕಾರ್ಲೋ ಗೆರೋಸಾ ಅವರಿಗಿದ್ದ ಹೆಲಿಕಾಪ್ಟರ್‌ಗಳ ಜ್ಞಾನ ಸಾಲದು ಎಂದು ವೆಸ್ಟ್‌ಲ್ಯಾಂಡ್‌ ಕಂಪನಿ ಮಿಷೆಲ್‌ ಅವರನ್ನು ನಿಯೋಜಿಸಿತ್ತು.

ADVERTISEMENT

ರಾಲ್ಫ್‌ ಮತ್ತು ಕಾರ್ಲೋ ಗೆರೋಸಾ ಹೆಸರನ್ನು ಸಿಬಿಐ ಮತ್ತು ಜಾರಿನಿರ್ದೇಶನಾಲಯದ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಭಾರತಕ್ಕೆ ಹಲವಾರು ಬಾರಿ ಭೇಟಿ ನೀಡಿದ್ದ ಮಿಷೆಲ್‌ಗೆ ಭಾರತೀಯ ಸೇನೆಯ ಕಾರ್ಯಾಚರಣೆ, ಶಸ್ತ್ರಾಸ್ತ್ರಗಳ ಬಗ್ಗೆ ಅಪಾರ ತಿಳಿವಳಿಕೆ ಇತ್ತು ಎಂದು ಸಿಬಿಐ ಹೇಳಿದೆ.

ಯುಪಿಎ ಅವಧಿಯಲ್ಲಿ (2010) ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಸೇರಿದಂತೆ ಗಣ್ಯರ ಹಾರಾಟಕ್ಕೆ ₹3600 ಕೋಟಿ ವೆಚ್ಚದಲ್ಲಿ ಭಾರತ 12 ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಒಪ್ಪಂದ ಆಗಿತ್ತು.

ಮಿಷೆಲ್‌ ವಿರುದ್ಧ ಸಿಬಿಐ ಸಿದ್ಧಪಡಿಸಿರುವ ಆರೋಪಪಟ್ಟಿ ಸುಮಾರು 30 ಸಾವಿರ ಪುಟಗಳಷ್ಟಿದೆ. ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳ ಹೆಸರುಗಳು ಆರೋಪಪಟ್ಟಿಯಲ್ಲಿವೆ.

‘ಯಾರೆಲ್ಲ ಹೆಸರು ಬರಲಿದೆ ಕಾದು ನೋಡಿ’
ಭಾರತಕ್ಕೆ ಕರೆತರಲಾದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ಭಾರತದ ಯಾವೆಲ್ಲ ರಾಜಕಾರಣಿಗಳ ಹೆಸರು ಬಾಯ್ಬಿಡಲಿದ್ದಾನೆ ಕಾಯ್ದು ನೋಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬುಧವಾರ ರಾಜಸ್ಥಾನ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯಗೊಳ್ಳುವ ಕೆಲ ಗಂಟೆಗಳ ಮೊದಲು ಅವರು ರಾಹುಲ್ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು.

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣದ ಮಧ್ಯವರ್ತಿಯನ್ನು ಸೌದಿಯಿಂದ ಕರೆತಂದ ಶ್ರೇಯ ತಮ್ಮ ಸರ್ಕಾರಕ್ಕೆ ಸಲ್ಲುತ್ತದೆ. ಇದು ತಮ್ಮ ಸರ್ಕಾರಕ್ಕೆ ಸಿಕ್ಕ ದೊಡ್ಡ ಗೆಲುವು ಎಂದು ಅವರು ಬಣ್ಣಿಸಿಕೊಂಡರು.

‘ಹಗರಣದ ಮಧ್ಯವರ್ತಿ ಯಾರಿಗೆಲ್ಲ ಕಪ್ಪ ಕಾಣಿಕೆ ಸಲ್ಲಿಸಿದ್ದಾನೆ ಎಂಬ ವಿವರಗಳು ಸದ್ಯದಲ್ಲಿಯೇ ಬಹಿರಂಗವಾಗಲಿವೆ. ಇನ್ನು ಮುಂದೆ ಯಾರ ವಿರುದ್ಧವೂ ಭ್ರಷ್ಟಾಚಾರದ ಆರೋಪ ಮಾಡುವ ಪ್ರಮೇಯ ಬರುವುದಿಲ್ಲ’ ಎಂದರು.

ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಕಾಂಗ್ರೆಸ್‌ ಕಟ್ಟಿ ಹಾಕಲು ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣವನ್ನು ಬಿಜೆಪಿ ಬಳಸಲಿದೆ ಎಂದು ಹೇಳಲಾಗುತ್ತಿದೆ.

ಪ್ರಧಾನಿ ಮೋದಿಯವರು ಚುನಾವಣೆಯಲ್ಲಿ ವಿರೋಧ ಪಕ್ಷಗಳನ್ನು ಹಣೆಯಲು ಮಿಷೆಲ್‌ ಅವರನ್ನು ಭಾರತಕ್ಕೆ ಕರೆತರುವ ಷಡ್ಯಂತ್ರ ಹೆಣೆದಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಬಲವಂತವಾಗಿ ಸುಳ್ಳು ತಪ್ಪೊಪ್ಪಿಗೆ ಹೇಳಿಕೆಗಳಿಗೆ ಮಿಷೆಲ್‌ನಿಂದ ಸಹಿ ಹಾಕಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದೆ.

ಯುವ ಕಾಂಗ್ರೆಸ್‌ನಿಂದ ಮಿಷೆಲ್‌ ವಕೀಲ ಉಚ್ಚಾಟನೆ

ನವದೆಹಲಿ: ದೆಹಲಿ ನ್ಯಾಯಾಲಯದಲ್ಲಿ ಕ್ರಿಶ್ಚಿಯನ್‌ ಮಿಷೆಲ್‌ ಪರ ವಾದ ಮಂಡಿಸಿದ ವಕೀಲ ಮತ್ತು ಯುವ ಕಾಂಗ್ರೆಸ್‌ ನಾಯಕ ಅಲ್ಜೊ ಕೆ. ಜೋಸೆಫ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ.

ಜೋಸೆಫ್‌ ವೈಯಕ್ತಿಕ ಮತ್ತು ವೃತ್ತಿ ನೆಲೆಯಲ್ಲಿ ಮಿಷೆಲ್‌ ಪರ ವಾದ ಮಂಡಿಸಿದ್ದಾರೆ. ಇದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ಮೇಲಾಗಿ ಈ ವಿಷಯವನ್ನು ಅವರು ಪಕ್ಷದ ಗಮನಕ್ಕೆ ತಂದಿರಲಿಲ್ಲ ಎಂದು ಯುವ ಕಾಂಗ್ರೆಸ್‌ ಪ್ರಕಟಣೆಯಲ್ಲಿ ಹೇಳಿದೆ.

ಇಂತಹ ನಿರ್ಧಾರಗಳನ್ನು ಪಕ್ಷ ಖಂಡಿತ ಒಪ್ಪುವುದಿಲ್ಲ. ಯುವ ಕಾಂಗ್ರೆಸ್‌ ಕಾನೂನು ಘಟಕದಿಂದ ಅವರನ್ನು ತಕ್ಷಣದಿಂದಲೇ ಉಚ್ಚಾಟಿಸಲಾಗಿದೆ ಎಂದು ಹೇಳಿದೆ.

ಜೋಸೆಫ್‌ ಯುವ ಕಾಂಗ್ರೆಸ್‌ ನಾಯಕ ಎಂಬುವುದನ್ನು ಮುಂಬೈ ಬಿಜೆಪಿ ಘಟಕದ ವಕ್ತಾರ ಸುರೇಶ್‌ ನಖುವಾ ಬಹಿರಂಗಗೊಳಿಸಿದ್ದರು. ವಿಷಯ ಬಹಿರಂಗವಾಗುತ್ತಲೇ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

**

ಮಿಷೆಲ್‌ ವಿರುದ್ಧ ಇಂಟರ್‌ಪೋಲ್‌ನ ರೆಡ್‌ಕಾರ್ನರ್ ನೋಟಿಸ್

* 2017ರಲ್ಲಿ ಮಿಷೆಲ್‌ ಬಂಧನ

* ಮಿಷೆಲ್‌ ಮತ್ತು ಇತರ 11 ಮಂದಿಯ ವಿರುದ್ಧ ಸಿಬಿಐ ಆರೋಪಪಟ್ಟಿ

* 2018ರಂದು ಆರೋಪಿಯನ್ನು ಹಸ್ತಾಂತರಿಸುವಂತೆ ಸೌದಿ ಅರೇಬಿಯಾಕ್ಕೆ ಭಾರತ ಮನವಿ

* ವಿಚಾರಣೆಗಾಗಿ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ದುಬೈ ನ್ಯಾಯಾಲಯ ಸಮ್ಮತಿ

* 2014ರಲ್ಲಿ ಒಪ್ಪಂದ ರದ್ದುಪಡಿಸಿದ ಎನ್‌ಡಿಎ ಸರ್ಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.