ನವದೆಹಲಿ: ವಿಚಾರಣೆ ಸಂದರ್ಭದಲ್ಲಿ ‘ಮಿಸೆಸ್ ಗಾಂಧಿ’, ‘ಇಟಲಿ ಮಹಿಳೆಯ ಪುತ್ರ’ನಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಯಾವ ರೀತಿ ನಿಭಾಯಿಸಬೇಕು ಎಂದು ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್‌ತಮ್ಮ ವಕೀಲರಿಗೆ ಚೀಟಿ ನೀಡಿ ಸಲಹೆ ಕೇಳಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಆರೋಪಿಸಿದೆ.
ಮಿಷೆಲ್ ತಮಗೆ ನೀಡಿದ ಕಾನೂನು ಸೇವಾ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಇ.ಡಿ ಶನಿವಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿ ನ್ಯಾಯಾಲಯಕ್ಕೆ ತಿಳಿಸಿತು.
ವಿಚಾರಣೆ ವೇಳೆ ತಮ್ಮ ವಕೀಲರನ್ನು ಭೇಟಿ ಮಾಡಲು ಮಿಷೆಲ್‌ಗೆ ಅವಕಾಶ ನೀಡಬಾರದು ಎಂದೂ ಇ.ಡಿ. ನ್ಯಾಯಾಲಯಕ್ಕೆ ಮನವಿ ಮಾಡಿತು.
‘ಡಿಸೆಂಬರ್ 27ರಂದು ವಿಚಾರಣೆ ನಡೆಯುವ ವೇಳೆ ‘ಮಿಸೆಸ್ ಗಾಂಧಿ’ ಹೆಸರನ್ನು ಮಿಷೆಲ್ ಉಲ್ಲೇಖಿಸಿದ್ದಾರೆ. ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ ಕೆಲವು ಕಾಗದಗಳನ್ನು ತಮ್ಮ ವಕೀಲ ಆಲ್ಜೊಕೆ ಜೋಸೆಫ್ ಅವರಿಗೆ ನೀಡಿರುವುದನ್ನು ಇ.ಡಿ. ಅಧಿಕಾರಿಗಳು ಗಮನಿಸಿದ್ದಾರೆ. ಆ ಕಾಗದಗಳನ್ನು ಪರಿಶೀಲಿಸಿದಾಗ, ‘ಮಿಸೆಸ್ ಗಾಂಧಿ’ ಅವರ ಕುರಿತಾದ ಕೇಳಬಹುದಾದ ಪ್ರಶ್ನೆಗಳು ಇದ್ದವು’ ಎಂದು ನ್ಯಾಯಾಲಯಕ್ಕೆ ಇ.ಡಿ ಮಾಹಿತಿ ನೀಡಿತು.
‘ಹಗರಣದಲ್ಲಿನ ದೊಡ್ಡ ಪಿತೂರಿಯನ್ನು ಪತ್ತೆ ಹಚ್ಚಲು ಮಿಷೆಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದು ಅನಿವಾರ್ಯವಾಗಿತ್ತು’ ಎಂದು ಇ.ಡಿ ಹೇಳಿತು.
ಡಿ. 22ರಂದು ಮಿಷೆಲ್‌ರನ್ನು ಬಂಧಿಸಿದ್ದ ಇ.ಡಿ, ಹೆಚ್ಚಿನ ವಿಚಾರಣೆಗೆ ಅವರನ್ನು ತನ್ನ ವಶಕ್ಕೆ ಒಪ್ಪಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತು. ಮನವಿ ಪುರಸ್ಕರಿಸಿದ ನ್ಯಾಯಾಲಯ ಮಿಷೆಲ್ ಅವರನ್ನು ಏಳು ದಿನ ಇ.ಡಿ. ವಶಕ್ಕೆ ಒಪ್ಪಿಸಿತು.
ಇದಕ್ಕೂ ಮುನ್ನ,ಸಿಬಿಐ ಪ್ರಕರಣದಲ್ಲಿ ಮಿಷೆಲ್‌ರನ್ನು ತಿಹಾರ್ ಜೈಲಿನಲ್ಲಿಡಲಾಗಿತ್ತು. ಆಗಸ್ಟಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಖರೀದಿ ಒಪ್ಪಂದಕ್ಕೆ ಸಹಕರಿಸುವ ಸಂಬಂಧಭಾರತೀಯ ವಾಯುಪಡೆ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಅವರ ಕುಟುಂಬದವರಿಗೆ ಮಿಷೆಲ್ ದೊಡ್ಡ ಮೊತ್ತದ ಲಂಚ ನೀಡಿದ್ದರು ಎಂದು ಸಿಬಿಐ ಆರೋಪಿಸಿತ್ತು.
ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಯಿಂದ ₹225 ಕೋಟಿಯನ್ನು ಮಧ್ಯವರ್ತಿ ಮಿಷೆಲ್ ಪಡೆದಿದ್ದ ಎಂದು ಇ.ಡಿ 2016ರ ಜೂನ್‌ನಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಹಗರಣದಲ್ಲಿ ಕಾಂಗ್ರೆಸ್ ಪಾತ್ರ: ಬಿಜೆಪಿ
‘ಮಿಸೆಸ್ ಗಾಂಧಿ’, ‘ಇಟಲಿ ಮಹಿಳೆಯ ಪುತ್ರ’ ಎಂಬಂತಹ ಪದಗಳನ್ನು ಜಾರಿ ನಿರ್ದೇಶನಾಲಯವು ನ್ಯಾಯಾಲಯದಲ್ಲಿ ಹೇಳಿರುವುದು, ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದಲ್ಲಿ ಕಾಂಗ್ರೆಸ್ ಪಾತ್ರವಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ.
‘ಸಾರ್ವಜನಿಕರ ಹಣವನ್ನು ಲೂಟಿ ಮಾಡಿರುವ ಸತ್ಯ ಈಗ ಬಹಿರಂಗವಾಗಿದೆ. ಎಲ್ಲವೂ ಒಂದೇ ಕುಟುಂಬಕ್ಕೆ ಹೋಗಿರುವುದು ಗೊತ್ತಾಗಿದೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ತನಿಖಾ ಸಂಸ್ಥೆಗಳ ದುರ್ಬಳಕೆ
ಸೋನಿಯಾ ಗಾಂಧಿ ಅವರ ಹೆಸರನ್ನು ಇ.ಡಿ ಸ್ಪಷ್ಟವಾಗಿ ಉಲ್ಲೇಖಿಸಿಲ್ಲ. ಆದರೆ, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಮಿಷೆಲ್ ಮೇಲೆ ಒತ್ತಡ ಹೇರುವ ಮೂಲಕ ಒಂದು ನಿರ್ದಿಷ್ಟ ಕುಟುಂಬದ ಹೆಸರನ್ನು ಹೇಳುವಂತೆ ಮಾಡುತ್ತಿದೆ. ಚುನಾವಣೆ ಹತ್ತಿರವಿರುವ ಕಾರಣ ಬಿಜೆಪಿ ಈ ರೀತಿ ಮಾಡುತ್ತಿದೆ’ ಎಂದು ಕಾಂಗ್ರೆಸ್ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.