ಕೊಟ್ಟಾಯಂ(ಕೇರಳ): ಕೋವಿಡ್ ಸಾಂಕ್ರಾಮಿಕದಿಂದ ಸಂಕಷ್ಟ ಎದುರಿಸುತ್ತಿರುವ ಐದು ಮತ್ತು ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕ್ರೈಸ್ತ ಸಮುದಾಯದ ದೊಡ್ಡ ಕುಟುಂಬಗಳಿಗೆ ಮಧ್ಯ ಕೇರಳದ ಕ್ಯಾಥೋಲಿಕ್ ಚರ್ಚ್ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದು, ಈ ಮೂಲಕ ಪರೋಕ್ಷವಾಗಿ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಜನ ಸಂಖ್ಯೆ ಹೆಚ್ಚಳಕ್ಕೆ ಉತ್ತೇಜನ ನೀಡುತ್ತಿರುವುದಾಗಿ ಹೇಳಿಕೊಂಡಿದೆ.
ಸಿರೊ–ಮಲಬಾರ್ ಚರ್ಚ್‌ನ ಪಾಲಾ ಡಯಾಸಿಸ್ ಅಡಿಯಲ್ಲಿ ಫ್ಯಾಮಿಲಿ ಅಪೊಸ್ಟೊಲೇಟ್, ಈ ನೂತನ ಉಪಕ್ರಮವನ್ನು ಆರಂಭಿಸಿದೆ. ಈ ಯೋಜನೆಯಡಿ 2000ನೇ ಇಸವಿಯ ನಂತರ ವಿವಾಹವಾದ ಮತ್ತು ಐದು ಮತ್ತು ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ದಂಪತಿಗೆ ಮಾಸಿಕ ₹1500 ನೀಡುವುದಾಗಿ ಫ್ಯಾಮಿಲಿ ಅಪೊಸ್ಟೊಲೇಟ್ ಮುಖ್ಯಸ್ಥರಾಗಿರುವ ಫ್ರಾನ್ಸಿನಸ್ ಜೋಸೆಫ್ ಕುಟ್ಟಿಯಾಂಕಲ್ ಸುದ್ದಿ ಸಂಸ್ಥೆಗೆ ತಿಳಿಸಿದರು.
ಚರ್ಚ್‌ನ ‘ಕುಟುಂಬದ ವರ್ಷಾಚರಣೆ‘ಯ ಅಂಗವಾಗಿ ಈ ಯೋಜನೆಯನ್ನು ಘೋಷಿಸಲಾಗಿದೆ. ಇದು ಕೋವಿಡ್ ಸಾಂಕ್ರಾಮಿಕದಿಂದ ಆರ್ಥಿಕ ತೊಂದರೆ ಎದುರಿಸುತ್ತಿರುವ ಹೆಚ್ಚು ಸದಸ್ಯರಿರುವ ದೊಡ್ಡ ಕುಟುಂಬಗಳಿಗೆ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ‘ ಎಂದು ಜೋಸೆಫ್ ತಿಳಿಸಿದರು.
ಚರ್ಚ್‌ನ ‘ಕುಟುಂಬದ ವರ್ಷಾಚರಣೆ‘ ಅಂಗವಾಗಿ ಸೋಮವಾರ ನಡೆದ ಆನ್‌ಲೈನ್ ಕಾರ್ಯಕ್ರಮದಲ್ಲಿ ಬಿಷಪ್ ಜೋಸೆಫ್ ಕಲ್ಲರಂಗಟ್ ಅವರು ಈ ಯೋಜನೆಯನ್ನು ಪ್ರಕಟಿಸಿದರು.‘ಶೀಘ್ರದಲ್ಲೇ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸುತ್ತೇವೆ. ಬಹುಶಃ ಆಗಸ್ಟ್ ತಿಂಗಳಿನಿಂದಲೇ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ ಎಂದರು.
‘ಕೇರಳದಲ್ಲಿ ಕ್ರೈಸ್ತರ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,ಕ್ರೈಸ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ವಾಸ್ತವ. ಈ ಯೋಜನೆ ಜಾರಿಗೆ ಇದೂ ಒಂದು ಕಾರಣ. ಆದರೆ, ಕೋವಿಡ್ ಸಾಂಕ್ರಾಮಿಕದಿಂದಾಗಿ ಸಂಕಷ್ಟದಲ್ಲಿರುವ ದೊಡ್ಡ ಕುಟುಂಬಗಳಿಗೆ ನೆರವು ನೀಡುವುದು ಈ ಯೋಜನೆಯ ತಕ್ಷಣದ ಉದ್ದೇಶ‘ ಎಂದರು.
‘ಕೇರಳ ರಾಜ್ಯ ರಚನೆಯಾದ ಸಂದರ್ಭದಲ್ಲಿ ರಾಜ್ಯದಲ್ಲಿ ಕ್ರೈಸ್ತ ಸಮುದಾಯ, ಎರಡನೇ ಅತಿ ದೊಡ್ಡ ಸಮುದಾಯವಾಗಿತ್ತು. ಆದರೆ, ಈಗ ಜನಸಂಖ್ಯೆಯ ಶೇ 18.38ಕ್ಕೆ ಇಳಿದಿದೆ. ಇತ್ತೀಚಿನ ವರ್ಷಗಳಲ್ಲಿ ಕ್ರಿಶ್ಚಿಯನ್ ಸಮುದಾಯದಲ್ಲಿ ಜನನ ಪ್ರಮಾಣ ಶೇ 14ಕ್ಕೆ ಇಳಿದಿದೆ‘ ಎಂದು ಆರ್ಚ್‌ಬಿಷಪ್ ಮಾರ್ ಜೋಸೆಫ್ ಪೆಮ್ತೊಟ್ಟಮ್ ಅವರು 2019ರಲ್ಲಿ ಬರೆದಿರುವ ಪತ್ರದಲ್ಲಿರುವ ವಿವರವನ್ನುಬಿಷಪ್ ಜೋಸೆಫ್ ಕಲ್ಲರಂಗಟ್ ಇದೇ ಸಂದರ್ಭದಲ್ಲಿ ಓದಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.