ನವದೆಹಲಿ:ತಿರುಪತಿಯ ವೆಂಕಟೇಶ್ವರ ದೇವಾಲಯಕ್ಕೆ ವಿಜಯನಗರದ ದೊರೆ ಶ್ರೀಕೃಷ್ಣದೇವರಾಯ 16ನೇ ಶತಮಾನದಲ್ಲಿ ನೀಡಿದ್ದ ಆಭರಣಗಳು ಎಲ್ಲಿ ಹೋಗಿವೆ ಎಂದು ಕೇಂದ್ರ ಮಾಹಿತಿ ಆಯೋಗವು (ಸಿಐಸಿ) ಪ್ರಶ್ನಿಸಿದೆ.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ (ಎಎಸ್‌ಐ), ಕೇಂದ್ರದ ಸಂಸ್ಕೃತಿ ಸಚಿವಾಲಯ, ಆಂಧ್ರ ಪ್ರದೇಶ ಸರ್ಕಾರ ಮತ್ತು ತಿರುಮಲ ತಿರುಪತಿ ದೇವಸ್ಥಾನಂಗಳಿಗೆ (ಟಿಟಿಡಿ) ಸಿಐಸಿ ಈ ಪ್ರಶ್ನೆ ಕೇಳಿದೆ.
ತಿರುಮಲದ ದೇವಾಲಯಗಳನ್ನು ರಾಷ್ಟ್ರೀಯ ಸ್ಮಾರಕಗಳು ಎಂದು ಘೋಷಿಸುವುದಕ್ಕೆ ಸಂಬಂಧಿಸಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯುಲು ಅವರು ಪ್ರಧಾನಿ ಕಚೇರಿಗೆ ಸೂಚಿಸಿದ್ದಾರೆ. ವಿಶ್ವ ಪಾರಂಪರಿಕ ತಾಣಗಳು ಮತ್ತು ಆಭರಣಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ಬದ್ಧತೆಗೆ ಅನುಗುಣವಾಗಿ ಏನು ಮಾಡಲಾಗಿದೆ ಎಂಬುದನ್ನೂ ಜನರಿಗೆ ತಿಳಿಸಬೇಕು ಎಂದು ಆಚಾರ್ಯುಲು ಹೇಳಿದ್ದಾರೆ.
ಬಿಕೆಎಸ್‌ಆರ್ ಅಯ್ಯಂಗಾರ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ಸೂಚನೆ ನೀಡಲಾಗಿದೆ. ತಿರುಮಲದ ದೇವಾಲಯಗಳನ್ನು ಚಾರಿತ್ರಿಕ ಮತ್ತು ರಾಷ್ಟ್ರೀಯ ಸ್ಮಾರಕಗಳೆಂದು ಘೋಷಿಸಬೇಕು ಎಂದು ಅಯ್ಯಂಗಾರ್ ಅವರು ಪ್ರಧಾನಿ ಕಚೇರಿಗೆ ಮನವಿ ಕೊಟ್ಟಿದ್ದರು. ಈ ಮನವಿಗೆ ಸಂಬಂಧಿಸಿ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸುವಂತೆ ಕೋರಿ ಅವರು ಸಿಐಸಿಗೆ ಅರ್ಜಿ ಸಲ್ಲಿಸಿದ್ದಾರೆ.
ತಿರುಮಲದ ದೇವಾಲಯಗಳನ್ನು ನೋಡಿಕೊಳ್ಳುತ್ತಿರುವ ಟಿಟಿಡಿ, ಅವುಗಳ ರಕ್ಷಣೆ ಮಾಡುತ್ತಿಲ್ಲ. ದೇವಾಲಯಗಳನ್ನು ಪ್ರಾಚೀನ ಸ್ಮಾರಕಗಳು ಎಂದು ಘೋಷಿಸುವುದಕ್ಕೆ ಸಂಬಂಧಿಸಿದ ಪ್ರಸ್ತಾವವನ್ನು ಟಿಟಿಡಿ 2011ರಲ್ಲಿ ತಿರಸ್ಕರಿಸಿದೆ ಎಂದು ಅಯ್ಯಂಗಾರ್ ಆರೋಪಿಸಿದ್ದಾರೆ.
ವೆಂಕಟೇಶ್ವರ ದೇವಾಲಯದ ಗೋಡೆಗಳಲ್ಲಿಶ್ರೀಕೃಷ್ಣ ದೇವರಾಯ ನೀಡಿದ ಆಭರಣಗಳ ಬಗ್ಗೆ ಮಾಹಿತಿ ಇದೆ ಎಂದು ಹೈದರಾಬಾದ್‌ನ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ಇಲಾಖೆಯ ನಿರ್ದೇಶಕರು 2011ರಲ್ಲಿ ವರದಿ ನೀಡಿದ್ದರು. ಕೃಷ್ಣದೇವರಾಯ ಕಾಣಿಕೆ ನೀಡಿದ ಆಭರಣವನ್ನು ಹೋಲುವ ಯಾವುದೇ ಆಭರಣ ಈಗ ದೇವಾಲಯದಲ್ಲಿ ಇಲ್ಲ ಎಂದೂ ಈ ವರದಿಯಲ್ಲಿ ಇತ್ತು ಎಂಬುದನ್ನು ಆಚಾರ್ಯುಲು ಉಲ್ಲೇಖಿಸಿದ್ದಾರೆ.
‘ಅರ್ಜಿದಾರರು ಸುಮ್ಮನೆ ಆರೋಪ ಮಾಡಿಲ್ಲ. ಸಂಸ್ಕೃತಿ ಸಚಿವಾಲಯದ ನಿರ್ದೇಶಕರು2011ರಲ್ಲಿ ಕೊಟ್ಟ ವರದಿಯ ಆಧಾರದಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಹೇಳಿದ್ದಾರೆ.
ಜಾರಿಯಾಗದ ಶಿಫಾರಸು
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ಪಿ. ವಾಧ್ವಾ ಮತ್ತು ನ್ಯಾಯಮೂರ್ತಿ ಜಗನ್ನಾಥ ರಾವ್ ನೇತೃತ್ವದಲ್ಲಿ ಆಭರಣಗಳ ಪರಿಶೀಲನೆಗೆ ಸಮಿತಿಯೊಂದನ್ನು ಟಿಟಿಡಿ ರಚಿಸಿತ್ತು. ಕಾಣಿಕೆ ಬಂದ ಆಭರಣಗಳ ಪಟ್ಟಿಯನ್ನು1952ರಲ್ಲಿ ಸಿದ್ಧಪಡಿಸಲಾಗಿದೆ. ಕೃಷ್ಣದೇವರಾಯನಿಂದ ಬಂದ ಕಾಣಿಕೆಯ ಉಲ್ಲೇಖ ಈ ಪಟ್ಟಿಯಲ್ಲಿ ಇಲ್ಲ ಎಂದು ಈ ಸಮಿತಿ ಹೇಳಿತ್ತು.
ಅಮೂಲ್ಯವಾದ ಎಲ್ಲ ಆಭರಣಗಳ ಪಟ್ಟಿ ಇದೆಯೇ, ಬಂದಿರುವ ಆಭರಣಗಳನ್ನು ಯಾವ ರೀತಿ ಲೆಕ್ಕ ಇಡಲಾಗುತ್ತಿತ್ತು ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದೂ ಸಮಿತಿ ಹೇಳಿತ್ತು.
ದಿಢೀರ್ ಭೇಟಿ ನೀಡಿ ಆಭರಣಗಳನ್ನು ಪರಿಶೀಲಿಸುವ ಪರಿಪಾಠ ಇರಿಸಿಕೊಳ್ಳಬೇಕು. ಗರ್ಭಗುಡಿಗೆ ಇತರರಿಗೆ ಪ್ರವೇಶ ಇಲ್ಲದ ಕಾರಣ ಮುಖ್ಯ ದೇವಾಲಯದ ಅರ್ಚಕರನ್ನು ಇದಕ್ಕೆ ಬಳಸಿಕೊಳ್ಳಬಹುದು ಎಂದು ಸಮಿತಿ ಶಿಫಾರಸು ಮಾಡಿತ್ತು.
ವಾಧ್ವಾ ಸಮಿತಿಯ ವರದಿಯ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಟಿಟಿಡಿ ಯಾವುದೇ ಮಾಹಿತಿ ಬಹಿರಂಗಪಡಿಸಿಲ್ಲ ಎಂದು ಆಚಾರ್ಯುಲು ಹೇಳಿದ್ದಾರೆ.
ಆಭರಣಗಳ ಸಮಗ್ರ ಪಟ್ಟಿ ಸಿದ್ಧಪಡಿಸಲು ದೇವಾಲಯದ ಆಡಳಿತವು ಹಿಂದೇಟು ಹಾಕುತ್ತಿರುವುದರ ಬಗ್ಗೆ ಆಂಧ್ರ ಪ್ರದೇಶ ಹೈಕೋರ್ಟ್ 2009ರಲ್ಲಿ ಆಶ್ಚರ್ಯ ವ್ಯಕ್ತಪಡಿಸಿತ್ತು ಎಂಬುದನ್ನೂ ಆಚಾರ್ಯುಲು ನೆನಪಿಸಿಕೊಂಡಿದ್ದಾರೆ.
ನ್ಯಾಯಮೂರ್ತಿ ವಾಧ್ವಾ ಸಮಿತಿಯ ವರದಿಯನ್ನು ಯಾಕೆ ಬಹಿರಂಗ ಮಾಡಿಲ್ಲ? ಆಭರಣಗಳ ರಕ್ಷಣೆಗೆ ಪಾರದರ್ಶಕ ಮತ್ತು ಲೋಪರಹಿತ ವ್ಯವಸ್ಥೆ ಇರಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಈ ಶಿಫಾರಸುಗಳ ಬಗ್ಗೆ ಕೈಗೊಂಡ ಕ್ರಮಗಳು ಏನು ಎಂದು ಆಚಾರ್ಯುಲು ಪ್ರಶ್ನಿಸಿದ್ದಾರೆ.
*
ಮಾಹಿತಿ ಹಕ್ಕು ಅರ್ಜಿಗಳಿಗೆ ಟಿಟಿಡಿ ಹಿಂದೆ ಉತ್ತರಿಸುತ್ತಿತ್ತು. ಈಗ ನಿರಾಕರಿಸುತ್ತಿದೆ. ದತ್ತಿ ಇಲಾಖೆಯ ಭಾಗವಾಗಿರುವ ಟಿಟಿಡಿ ಒಂದ ಸಾರ್ವಜನಿಕ ಸಂಸ್ಥೆ
-ಶ್ರೀಧರ ಆಚಾರ್ಯುಲು, ಕೇಂದ್ರ ಮಾಹಿತಿ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.