ಶಿಮ್ಲಾ: ಸಿಎಂಗಾಗಿ ತಂದಿಟ್ಟಿದ್ದ ‘ಸಮೋಸಾ’ ಕಾಣೆಯಾಗಿರುವ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸಲಾಗಿದೆ ಎಂಬ ವಿಚಾರವು ಹಿಮಾಚಲ ಪ್ರದೇಶ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಸ್ಪಷ್ಟನೆ ನೀಡಿದ್ದಾರೆ.
ಅಕ್ಟೋಬರ್ 21ರಂದು ಇಲ್ಲಿನ ಸಿಐಡಿ ಕೇಂದ್ರ ಕಚೇರಿಗೆ ಸಿಎಂ ಸುಖ್ವಿಂದರ್ ಸಿಂಗ್ ಭೇಟಿ ನೀಡಿದ್ದರು. ಈ ವೇಳೆ ಅವರಿಗಾಗಿ ತರಿಸಿದ್ದ ಸಮೋಸಾ ಮತ್ತು ಕೇಕ್ ಬಾಕ್ಸ್ ಕಾಣೆಯಾಗಿತ್ತು. ಈ ಕ್ಷುಲ್ಲಕ ವಿಚಾರದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ ಎಂಬುವುದು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐಗೆ ಪ್ರತಿಕ್ರಿಯೆ ನೀಡಿರುವ ಸುಖು, ‘ಅಂತಹ ಯಾವುದೇ ಘಟನೆ ನಡೆದಿಲ್ಲ. ಸಮೋಸಾವನ್ನು ನಮ್ಮ ಸಿಬ್ಬಂದಿಗೆ ಹಂಚಲಾಗಿತ್ತು. ಸಿಐಡಿ ತನಿಖೆಯು ಅನುಚಿತ ವರ್ತನೆ ಸಂಬಂಧಿಸಿದ್ದಾಗಿದೆಯೇ ವಿನಃ ಸಮೋಸಾದ ಬಗ್ಗೆ ಅಲ್ಲ. ಆದರೆ, ನೀವು(ಮಾಧ್ಯಮ) ಸಮೋಸಾದ ಬಗ್ಗೆ ಸುದ್ದಿ ಮಾಡುತ್ತಿದ್ದೀರಿ’ ಎಂದು ಕಿಡಿಕಾರಿದರು.
ಸಿಐಡಿ ಉಪ ನಿರ್ದೇಶಕ ಸಂಜೀವ್ ರಂಜನ್ ಒಜಾ ಮಾತನಾಡಿ, ‘ಇದು ಸಂಪೂರ್ಣವಾಗಿ ಸಿಐಡಿಯ ಆಂತರಿಕ ವಿಷಯವಾಗಿದ್ದು, ರಾಜಕೀಯಗೊಳಿಸಬಾರದು. ನಾವು ಯಾರಿಗೂ ನೋಟಿಸ್ ನೀಡಿಲ್ಲ. ಅಲ್ಲಿ ಏನು ನಡೆದಿದೆ ಎಂಬುದನ್ನಷ್ಟೇ ತಿಳಿದುಕೊಳ್ಳಲು ಹೇಳಿದ್ದೇವೆ. ಸರ್ಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಈ ಮಾಹಿತಿ ಹೇಗೆ ಸೋರಿಕೆಯಾಗಿದೆ ಎಂಬುವುದರ ಬಗ್ಗೆ ನಾವು ಪರಿಶೀಲಿಸುತ್ತಿದ್ದೇವೆ’ ಎಂದರು.
ಏತನ್ಮಧ್ಯೆ, ಸಮೋಸಾ ವಿಚಾರಕ್ಕೆ ಸಿಐಡಿ ತನಿಖೆ ನಡೆಸುತ್ತಿರುವುದನ್ನು ವಿರೋಧಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಶಿಮ್ಲಾದಲ್ಲಿ ಮೆರವಣಿಗೆ ನಡೆಸಿದ್ದಾರೆ.
‘ಸಣ್ಣಪುಟ್ಟ ವಿಚಾರಗಳಿಗೆ ಪೊಲೀಸರು ತಮ್ಮ ಸಮಯ ಹಾಳು ಮಾಡುವ ಬದಲು, ಮುಖ್ಯಮಂತ್ರಿಯಿಂದ ಕಾರ್ಯದರ್ಶಿವರೆಗೆ ನಡೆದಿರುವ ಹಗರಣಗಳ ಬಗ್ಗೆ ತನಿಖೆ ನಡೆಸಲಿ ಎಂದು ’ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸತ್ಪಾಲ್ ಸತ್ತಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.