ಒಸ್ಮಾನಾಬಾದ್, ಮಹಾರಾಷ್ಟ್ರ:‘ ಮಹಾರಾಷ್ಟ್ರದ ಮಾಜಿ ಸಚಿವ ಪದಮ್‌ಸಿನ್ಹ್ ಪಾಟೀಲ್ ಅವರು ನನ್ನನ್ನು ಕೊಲ್ಲಲು ಸಂಚು ರೂಪಿಸಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು2009ರಲ್ಲಿ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ಸಿಐಡಿ ಈಗಲೂ ತನಿಖೆ ನಡೆಸುತ್ತಿದೆ’ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದ ದಾಖಲೆಯಲ್ಲಿ ಬಹಿರಂಗಗೊಂಡಿದೆ.
‘ನನ್ನನ್ನು ಕೊಲ್ಲಲು ಸುಪಾರಿ ನೀಡಲಾಗಿದೆ’ ಎಂದು ಪಾಟೀಲ್ ಹಾಗೂ ನಾಲ್ವರ ವಿರುದ್ಧ 2009ರ ಸೆಪ್ಟೆಂಬರ್‌ನಲ್ಲಿಹಜಾರೆ ಅವರು ದೂರು ದಾಖಲಿಸಿದ್ದರು. ಇದಾದ ಬಳಿಕ ಪಾಟೀಲ್ ಅವರನ್ನು ಬಂಧಿಸಲಾಗಿತ್ತು, ನಂತರ ಅವರು ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾಗಿದ್ದರು.
‘ಅಹ್ಮದ್‌ನಗರ ಜಿಲ್ಲೆಯ ಪರ್ನರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟೆ ದೋಷಾರೋಪ ಪಟ್ಟಿ ಸಲ್ಲಿಸಬೇಕಿದೆ’ ಎಂದು ಆರ್‌ಟಿಐನಲ್ಲಿ ತಿಳಿಸಲಾಗಿದೆ.
ಪದಮ್‌ಸಿನ್ಹ್ ಪಾಟೀಲ್ ತನ್ನ ರಾಜಕೀಯ ವೈರಿ ಪವನ್‌ರಾಜೆ ನಿಂಬಾಳ್ಕರ್ ಅವರನ್ನು ಹತ್ಯೆ ಮಾಡಲು ಪಾರಸ್‌ಮಲ್‌ಜೈನ್‌ಗೆ ಸುಪಾರಿ ನೀಡಿದ್ದರೆಂಬ ಆರೋಪವಿದೆ. 2006 ಜೂನ್ 3ರಂದು ನವಿ ಮುಂಬೈನಲ್ಲಿ ನಿಂಬಾಳ್ಕರ್ ಅವರ ಹತ್ಯೆ ಯತ್ನ ನಡೆದರೂ, ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದ ನಿಂಬಾಳ್ಕರ್, ‘ನನ್ನ ಮತ್ತು ಹಜಾರೆ ಹತ್ಯೆ ಮಾಡಲು ಪಾರಸ್‌ಮಲ್ ಜೈನ್ ಎಂಬುವವರಿಗೆಪದಮ್‌ಸಿನ್ಹ್ ಪಾಟೀಲ್ ₹30 ಲಕ್ಷ ಹಣ ನೀಡಿದ್ದರು’ ಎಂದಿದ್ದರು.
‘ಹಜಾರೆ ಹತ್ಯೆ ಮಾಡಲು ನಾನು ಯಾವುದೇ ಹಣ ಪಡೆದಿರಲಿಲ್ಲ’ ಎಂದು ಜೈನ್ ಸ್ಪಷ್ಟಪಡಿಸಿದ್ದರು.
ಹಜಾರೆ ಅವರು ದಾಖಲಿಸಿದ್ದ ಈ ಪ್ರಕರಣದ ಯಥಾಸ್ಥಿತಿ ಕುರಿತಂತೆ ನಿಂಬಾಳ್ಕರ್ ಮಗ ಜೈರಾಜ್ ನಿಂಬಾಳ್ಕರ್ ಆರ್‌ಟಿಐ ಅಡಿಯಲ್ಲಿ ಮಾಹಿತಿ ಕೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.