ನವದೆಹಲಿ: ಭಾರತದಲ್ಲಿ ತುರ್ತು ಬಳಕೆಗಾಗಿ ಮಾಡರ್ನಾ ಕೋವಿಡ್–19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪನಿಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದ (ಡಿಸಿಜಿಐ) ಅನುಮೋದನೆ ದೊರೆತಿದೆ. ಈ ಕುರಿತು ಪಿಟಿಐ ವರದಿ ಮಾಡಿದೆ.
18 ವರ್ಷ ಮೇಲ್ಪಟ್ಟವರಲ್ಲಿ ಮಾಡರ್ನಾ ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲಾಗುತ್ತದೆ. ಅಮೆರಿಕದಲ್ಲಿ ತಯಾರಿಸಲಾಗುತ್ತಿರುವ ಮಾಡರ್ನಾ ಲಸಿಕೆಯ ಆಮದು ಮತ್ತು ಮಾರುಕಟ್ಟೆ ಹಕ್ಕುಗಳಿಗಾಗಿ ದೇಶೀಯ ಔಷಧ ಕಂಪನಿ ಸಿಪ್ಲಾ ಸೋಮವಾರ ಮನವಿ ಸಲ್ಲಿಸಿತ್ತು.
ಮಾಡರ್ನಾ ಭಾರತದಲ್ಲಿ ಬಳಕೆಯಾಗಲಿರುವ ನಾಲ್ಕನೇ ಕೋವಿಡ್ ಲಸಿಕೆಯಾಗಲಿದೆ. ದೇಶದಲ್ಲಿ ಸದ್ಯ ಆಸ್ಟ್ರಾಜೆನೆಕಾದ ಕೋವಿಶೀಲ್ಡ್, ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಮತ್ತು ರಷ್ಯಾದ ಸ್ಪುಟ್ನಿಕ್–ವಿ ಲಸಿಕೆ ನೀಡಲು ಅನುಮತಿ ಇದೆ.
'ದೇಶದಲ್ಲಿ ತುರ್ತು ಸಂದರ್ಭಗಳಲ್ಲಿ ನಿಯಂತ್ರಿತ ಬಳಕೆಗಾಗಿ ಮಾಡರ್ನಾ ಕೋವಿಡ್–19 ಲಸಿಕೆಯನ್ನು ಆಮದು ಮಾಡಿಕೊಳ್ಳಲು ಸಿಪ್ಲಾಗೆ ಡಿಸಿಜಿಐ ಅನುಮತಿ ನೀಡಿದೆ. ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940ರ ಅಡಿಯಲ್ಲಿ ಹೊಸ ಔಷಧಗಳು ಮತ್ತು ಕ್ಲಿನಿಕಲ್ ಟ್ರಯಲ್ ನಿಯಮಗಳು, 2019ರ ಅನ್ವಯ ಅನುಮತಿ ನೀಡಲಾಗಿದೆ' ಎಂದು ಮೂಲಗಳಿಂದ ತಿಳಿದು ಬಂದಿದೆ.
ಕೊವ್ಯಾಕ್ಸ್ ಮೂಲಕ ಭಾರತಕ್ಕೆ ಸ್ವಲ್ಪ ಪ್ರಮಾಣದ ಮಾಡರ್ನಾ ಕೋವಿಡ್–19 ಲಸಿಕೆ ಡೋಸ್‌ಗಳನ್ನು ಪೂರೈಸಲು ಅಮೆರಿಕ ಸರ್ಕಾರ ಸಮ್ಮತಿಸಿದೆ ಎಂದು ಜೂನ್ 27ರಂದು ಮಾಡರ್ನಾ ಕಂಪನಿಯು ಡಿಸಿಜಿಐಗೆ ತಿಳಿಸಿತ್ತು.
'ಸಾರ್ವಜನಿಕ ಹಿತಾಸಕ್ತಿಯ ಕಾರಣಗಳಿಂದಾಗಿ ಅನುಮತಿಯು ತುರ್ತು ಸಂದರ್ಭಗಳಲ್ಲಿ ನಿಯಂತ್ರಿತ ಬಳಕೆಗಾಗಿ ಮಾತ್ರ ಅನ್ವಯವಾಗಲಿದೆ. ಕಂಪನಿಯು ಲಸಿಕೆ ಹಾಕಿಸಿಕೊಂಡ ಮೊದಲ 100 ಜನರ ಆರೋಗ್ಯ ಸುರಕ್ಷತೆಯನ್ನು ಗಮನಿಸಿ, ಏಳು ದಿನಗಳ ಸುರಕ್ಷತಾ ಮೌಲ್ಯಮಾಪನ ಸಲ್ಲಿಸುವಂತೆ ಸೂಚಿಸಲಾಗಿದೆ. ಮಾಡರ್ನಾ ಲಸಿಕೆ ಬಳಕೆ ವಿಸ್ತರಿಸುವುದಕ್ಕೂ ಮುನ್ನ ಸೂಚನೆಗಳನ್ನು ಅನುಸರಿಸುವಂತೆ ಅನುಮತಿ ಆದೇಶದಲ್ಲಿ ತಿಳಿಸಲಾಗಿದೆ' ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ವಿದೇಶದಲ್ಲಿ ತಯಾರಿಸಲಾಗಿರುವ ಕೋವಿಡ್–19 ಲಸಿಕೆಗಳನ್ನು ಭಾರತದಲ್ಲಿ ಬಳಸಲು ಅನುವಾಗುವಂತೆ ಕೇಂದ್ರ ಸರ್ಕಾರವು ಏಪ್ರಿಲ್‌ನಲ್ಲಿ ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅಮೆರಿಕದ ಎಫ್‌ಡಿಎ, ಇಎಂಎ, ಇಂಗ್ಲೆಂಡ್‌ನ ಎಂಎಚ್‌ಆರ್‌ಎ, ಜಪಾನ್‌ನ ಪಿಎಂಡಿಎ ಅನುಮೋದಿತ ಲಸಿಕೆಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿರುವ ಲಸಿಕೆಗಳನ್ನು ಭಾರತದಲ್ಲಿ ಬಳಸಲು ಅವಕಾಶವಿದೆ. ಪ್ರತ್ಯೇಕವಾಗಿ ಭಾರತದಲ್ಲಿ ಆ ಲಸಿಕೆಗಳ ಪ್ರಯೋಗ ನಡೆಸುವ ಪ್ರಕ್ರಿಯೆಯನ್ನು ಕೈಬಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.