ಚಂಡೀಗಢ: ‘ಸಂಸದೆ ಕಂಗನಾ ರನೌತ್ ಈ ಹಿಂದೆ ನೀಡಿದ್ದ ಹೇಳಿಕೆಯಿಂದಾಗಿ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕೋಪಗೊಂಡು ಕಪಾಳ ಮೋಕ್ಷ ಮಾಡಿರಬಹುದು. ಆದರೆ ಈ ರೀತಿಯ ಘಟನೆ ನಡೆಯಬಾರದಿತ್ತು’ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಂಗನಾ ನೀಡಿದ್ದ ಹೇಳಿಕೆಯು ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಮನಸ್ಸಿನ ಮೇಲೆ ಪ್ರಭಾವ ಬೀರಿರಬಹುದು. ಇದರಿಂದಾಗಿ ಈ ಘಟನೆ ನಡೆದಿರಬಹುದು. ಆದರೆ ಇಂತಹ ಘಟನೆ ನಡೆಯಬಾರದಿತ್ತು‘ ಎಂದು ಪುನರುಚ್ಚರಿಸಿದರು.
‘ಪಂಜಾಬ್ ಅನ್ನು ಭಯೋತ್ಪಾದನಾ ರಾಜ್ಯ ಹಾಗೂ ಇಲ್ಲಿನ ಪ್ರಜೆಗಳನ್ನು ಪ್ರತ್ಯೇಕವಾದಿಗಳೆಂದು ಕರೆಯುವುದು ತಪ್ಪು. ಸ್ವಾತಂತ್ರ್ಯ ಹೋರಾಟದಲ್ಲಿ ಪಂಜಾಬ್ ಜನರು ಪಾಲ್ಗೊಂಡ ಬಗೆಯನ್ನು ಮರೆಯುವಂತಿಲ್ಲ‘ ಎಂದು ಕಂಗನಾ ನೀಡಿದ್ದ ಭಯೋತ್ಪಾದನೆ ಕುರಿತ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ನೂತನ ಸಂಸದೆ ಕಂಗನಾ ರನೌತ್ ಅವರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಮಂಡಳಿಯ ಕಾನ್‌ಸ್ಟೆಬಲ್ ಕಪಾಳಮೋಕ್ಷ ಮಾಡಿದ ಘಟನೆ ಗುರುವಾರ ನಡೆದಿತ್ತು.
ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರು ಕಂಗನಾ ಮೇಲೆ ಹಲ್ಲೆ ನಡೆಸಿದ್ದರು. ಈ ಹಿಂದೆ ರೈತರ ಕುರಿತು ಅಗೌರವದಿಂದ ಮಾತನಾಡಿದ್ದರಿಂದ ಅಸಮಾಧಾನಗೊಂಡು ಹಲ್ಲೆ ನಡೆಸಿರುವುದಾಗಿ ಕೌರ್ ಹೇಳಿದ್ದಾರೆ.
ಚಂಡೀಗಢದಿಂದ ದೆಹಲಿಗೆ ಪ್ರಯಾಣಿಸಲು ಕಂಗನಾ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಭದ್ರತಾ ತಪಾಸಣೆ ವೇಳೆ, ಕೌರ್ ಅವರು ಕಂಗನಾಗೆ ಕಪಾಳಮೋಕ್ಷ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.