ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ ಹಾಗೂ ನೂತನ ಸಂಸದೆ ಕಂಗನಾ ರನೌತ್ ಅವರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಮಂಡಳಿಯ ಕಾನ್‌ಸ್ಟೆಬಲ್ ಕಪಾಳಮೋಕ್ಷ ಮಾಡಿದ ಘಟನೆ ಗುರುವಾರ ನಡೆದಿದೆ.
ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಎಂಬುವವರೇ ಕಂಗನಾ ಮೇಲೆ ಹಲ್ಲೆ ನಡೆಸಿದವರು. ಹಿಂದೆ ರೈತರ ಕುರಿತು ಅಗೌರವದಿಂದ ಮಾತನಾಡಿದ್ದರಿಂದ ಅಸಮಾಧಾನಗೊಂಡು ಹಲ್ಲೆ ನಡೆಸಿರುವುದಾಗಿ ಕೌರ್ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಕಂಗನಾ ಗೆದ್ದಿದ್ದರು. ಚಂಡೀಗಢದಿಂದ ದೆಹಲಿಗೆ ಪ್ರಯಾಣಿಸಲು ಇವರು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಭದ್ರತಾ ತಪಾಸಣೆ ವೇಳೆ, ಕೌರ್ ಅವರು ಕಂಗನಾಗೆ ಕಪಾಳಮೋಕ್ಷ ಮಾಡಿದ್ದಾರೆ.
2020–21ರಲ್ಲಿ ರೈತ ವಿರೋಧ ನೀತಿ ಕೈಬಿಡುವಂತೆ ಹಾಗೂ ಇತರ ಬೇಡಿಕೆಗಳನ್ನು ಈಡೇರಿಸುವಂತೆ ರೈತರು ದೆಹಲಿಯ ಗಡಿಯಲ್ಲಿ 15 ತಿಂಗಳ ಸುದೀರ್ಘ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಕಂಗನಾ ಅಗೌರವದಿಂದ ಮಾತನಾಡಿದ್ದರು. ಇದರಿಂದ ಬೇಸರಗೊಂಡು ಹಲ್ಲೆ ನಡೆಸಿರುವುದಾಗಿ ಕಂಗನಾಗೆ ಕೌರ್ ಹೇಳಿದ್ದಾರೆ ಎಂದು ವರದಿಯಾಗಿದೆ.
ಘಟನೆ ಕುರಿತು ಕೆಲವೊಂದು ವಿಡಿಯೊಗಳು ಹರಿದಾಡುತ್ತಿದ್ದು, ಭದ್ರತಾ ಸಿಬ್ಬಂದಿ ಕಂಗನಾ ಅವರನ್ನು ಕರೆದೊಯ್ದರು. ಈ ಸಂದರ್ಭದಲ್ಲಿ ಸಿಐಎಸ್‌ಎಫ್ ಅಧಿಕಾರಿಗಳೊಂದಿಗೆ ಕಂಗನಾ ಮಾತನಾಡುತ್ತಿದ್ದ ದೃಶ್ಯ ಕಂಡುಬಂದಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.