ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ನಿರ್ಧರಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆಮತ್ತು ಜಾಮಿಯಾ ವಿವಿ ಮೇಲೆ ನಡೆದ ಪೊಲೀಸ್ ದಾಳಿ ವಿಚಾರ ರಾಷ್ಟ್ರ ರಾಜಧಾನಿಯಲ್ಲಿ ಇಂದು ತೀವ್ರ ಪ್ರತಿಭಟನೆಗೆ ಕಾರಣವಾಗಿದೆ. ಪೂರ್ವ ದೆಹಲಿಯ ಸೀಲಂಪುರಪ್ರದೇಶದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಿದ್ದ ಪ್ರತಿಭಟನಾಕಾರರು ಪೊಲೀಸರ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಆ ವೇಳೆ ಪೊಲೀಸರು ಜನರ ಗುಂಪಿನ ಮೇಲೆ ಅಶ್ರುವಾಯು ಸಿಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಘಟನೆಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಹಲವು ಪ್ರತಿಭಟನಾಕಾರರಿಗೆಗಾಯಗಳಾಗಿವೆ. ಕಲ್ಲು ತೂರಾಟದಲ್ಲಿ ಕಾರ್, ಬೈಕ್ ಸೇರಿದಂತೆ ಹಲವು ವಾಹನಗಳು ಜಖಂಗೊಂಡಿವೆ.
‘ಮಧ್ಯಾಹ್ನ 12 ಗಂಟೆಗೆ ಪ್ರತಿಭಟನೆ ಆರಂಭವಾಯಿತು. ಆ ವೇಳೆ ಪ್ರಮುಖ ತಿರುವಿನಲ್ಲಿ ಸಾವಿರಾರು ಜನರು ಸೇರಿಕೊಂಡರು. ಪ್ರತಿಭಟನಾಕಾರರು ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆವಿರುದ್ದ ಘೋಷಣೆ ಕೂಗುತ್ತಿದ್ದರು. ಆ ವೇಳೆ ಗಲಭೆ ಶುರುವಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರದೇಶದ ಮೂರು ಮೆಟ್ರೊನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮದ್ವಾರಗಳನ್ನು ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೊರೈಲು ನಿಗಮವು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.