ನವದೆಹಲಿ: ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನದ ಮುಸ್ಲಿಮೇತರರಿಗೆ ಭಾರತದ ಪೌರತ್ವ ನೀಡುವ ಮಸೂದೆಗೆ ಲೋಕಸಭೆ ಮಂಗಳವಾರ ಒಪ್ಪಿಗೆ ನೀಡಿದೆ.
ಪೌರತ್ವ (ತಿದ್ದುಪಡಿ) ಮಸೂದೆ 2019 ಸಂವಿಧಾನದ ಅವಕಾಶಗಳಿಗೆ ವಿರುದ್ಧವಾಗಿಲ್ಲ. ಭಾರತದ ನೆರೆಯ ಮೂರು ದೇಶಗಳಲ್ಲಿ ಕಿರುಕುಳಎದುರಿಸುತ್ತಿರುವ ಅಲ್ಲಿನಅಲ್ಪಸಂಖ್ಯಾತರಿಗೆ ನೆರವುನೀಡುವುದು ಈ ಮಸೂದೆಯು ಉದ್ದೇಶ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಈ ಜನರಿಗೆ ಭಾರತ ಬಿಟ್ಟರೆ ಹೋಗಲು ಬೇರೆ ನೆಲೆ ಇಲ್ಲ.ನೆರೆಯ ದೇಶಗಳಲ್ಲಿ ತೊಂದರೆಗೊಳಗಾದ ಅಲ್ಪಸಂಖ್ಯಾತರಿಗೆ ಆಶ್ರಯ ನೀಡಬೇಕು ಎಂಬುದನ್ನು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಸೇರಿ ಹಲವರುಪ್ರತಿಪಾದಿಸಿದ್ದರು ಎಂದು ರಾಜನಾಥ್ ವಿವರಿಸಿದರು.
ಬಾಂಗ್ಲಾ ದೇಶದಲ್ಲಿ ಕಿರುಕುಳಕ್ಕೆ ಒಳಗಾಗುತ್ತಿರುವ ಹಿಂದೂಗಳಬಗ್ಗೆ ಸರ್ಕಾರ ಉದಾರವಾಗಿರಬೇಕು ಎಂದು ಮಾಜಿ ಪ್ರಧಾನಿಮನಮೋಹನ್ ಸಿಂಗ್ ಅವರುರಾಜ್ಯಸಭೆಯಲ್ಲಿ ಹೇಳಿದ್ದರು ಎಂಬುದನ್ನೂ ರಾಜನಾಥ್ ನೆನಪಿಸಿದರು. ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಬೇಕು ಎಂದು ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಜತೆಗೆಭಾರತ ಒಪ್ಪಂದ ಮಾಡಿಕೊಂಡಿದ್ದರೂ ಅದು ಅನುಷ್ಠಾನವಾಗಿಲ್ಲ ಎಂದು ಅವರು ಹೇಳಿದರು.
ಈ ಮಸೂದೆಯು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುತ್ತದೆ ಎಂಬ ಆಕ್ಷೇಪವನ್ನು ಅವರು ತಳ್ಳಿ ಹಾಕಿದರು.
ಅಸ್ಸಾಂನಲ್ಲಿ ಈ ಮಸೂದೆಯ ವಿರುದ್ಧ ಮಂಗಳವಾರ ಬಂದ್ ನಡೆಸಲಾಗಿತ್ತು. ಆದರೆ, ಈ ಮಸೂದೆಯು ಅಸ್ಸಾಂಗಷ್ಟೇ ಸೀಮಿತವಾದ ವಿಚಾರ ಅಲ್ಲ. ಈ ಮೂರು ದೇಶಗಳಿಂದ ಬರುವ ವಲಸಿಗರ ಹೊರೆಯನ್ನು ಇಡೀ ದೇಶವೇ ಹೊತ್ತುಕೊಳ್ಳಲಿದೆ. ಈ ವಿಚಾರದಲ್ಲಿ ಅಸ್ಸಾಂ ಸರ್ಕಾರಕ್ಕೆ ಕೇಂದ್ರ ಸರ್ಕಾರವು ಎಲ್ಲ ನೆರವು ನೀಡಲಿದೆ ಎಂದು ಭರವಸೆ ಕೊಟ್ಟಿದ್ದಾರೆ.
**
ಈಶಾನ್ಯದಲ್ಲಿ ಭಾರಿ ವಿರೋಧ
ಈ ಮಸೂದೆಯನ್ನು ಬಿಜೆಪಿಯ ಮಿತ್ರ ಪಕ್ಷಗಳೇ ವಿರೋಧಿಸುತ್ತಿವೆ. ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ವಿರೋಧ ವ್ಯಕ್ತವಾಗಿದೆ. ಎನ್‌ಡಿಎಯಿಂದಅಸ್ಸಾಂ ಗಣ ಪರಿಷತ್ (ಎಜಿಪಿ) ಹೊರಗೆ ಹೋಗಿದೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಭಾಗವಾಗಿ ಎಜಿಪಿ ಇತ್ತು. ಎನ್‌ಡಿಎ ಅಂಗಪಕ್ಷಗಳಾದ ಶಿವಸೇನಾ ಮತ್ತು ಜೆಡಿಯು ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ.
ಮಿಜೋರಾಂ ಮತ್ತು ಮೇಘಾಲಯ ಸರ್ಕಾರಗಳು ಈ ಮಸೂದೆಯನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಿವೆ.
ಮಸೂದೆಯನ್ನು ವಿರೋಧಿಸಿ ಹಲವು ರಾಜ್ಯಗಳು ನಿರ್ಣಯ ಅಂಗೀಕರಿಸಿವೆ. ಹಾಗಾಗಿ ಮಸೂದೆಯನ್ನು ಸಂಸತ್ತಿನ ಆಯ್ಕೆ ಸಮಿತಿಯ ಪರಿಶೀಲನೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು. ಸರ್ಕಾರ ಇದಕ್ಕೆ ಒಪ್ಪದಿದ್ದಾಗ ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿದರು. ತೃಣಮೂಲ ಕಾಂಗ್ರೆಸ್ ಪಕ್ಷ ಕೂಡ ಮಸೂದೆಯನ್ನು ವಿರೋಧಿಸಿದೆ.
**
ಮಸೂದೆ ಏನು?
ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಪ್ಗಾನಿಸ್ತಾನದ ಹಿಂದೂ, ಜೈನ, ಕ್ರೈಸ್ತ, ಸಿಖ್, ಬೌದ್ಧ ಮತ್ತು ಪಾರ್ಸಿ ಸಮುದಾಯದಜನರಿಗೆ ಭಾರತದ ಪೌರತ್ವ ನೀಡಲು ಮಸೂದೆ ಅವಕಾಶ ಕೊಡುತ್ತದೆ.
ಹೀಗೆ ಪೌರತ್ವ ಪಡೆಯಲು ಇವರು 12 ವರ್ಷ ಭಾರತದಲ್ಲಿ ನೆಲೆಸಿರಬೇಕು ಎಂಬ ನಿಯಮ ಹಿಂದೆ ಇತ್ತು. ಈಗ ಆರು ವರ್ಷಕ್ಕೆ ಇಳಿಸಲಾಗಿದೆ. ಈ ಜನರು ಯಾವುದೇ ದಾಖಲೆಗಳನ್ನುಹೊಂದಿರಬೇಕಾದ ಅಗತ್ಯ ಇಲ್ಲ.
**
ಡಿಎನ್‌ಎ ನಿಧಿ ಸ್ಥಾಪನೆ ಮಸೂದೆಗೆ ಒಪ್ಪಿಗೆ
ನಾಪತ್ತೆಯಾದ ವ್ಯಕ್ತಿಗಳನ್ನು ಗುರುತಿಸಲು ಮತ್ತು ವಿಕೋಪಗಳ ಸಂತ್ರಸ್ತರ ಗುರುತನ್ನು ಬೇಗನೆ ಪತ್ತೆ ಮಾಡಲು ನೆರವಾಗುವುದಕ್ಕಾಗಿ ಡಿಎನ್‌ಎ ದತ್ತಾಂಶವು ನಿಧಿ ಸ್ಥಾಪನೆಯ ಮಸೂದೆಗೆ ಲೋಕಸಭೆ ಅನುಮೋದನೆ ನೀಡಿದೆ. ಅಪರಾಧಿಗಳ ಡಿಎನ್‌ಎ ಮಾಹಿತಿ ಸಂಗ್ರಹಕ್ಕೂ ಇದರಲ್ಲಿ ಅವಕಾಶ ಇದೆ.
ಡಿಎನ್‌ಎ ತಂತ್ರಜ್ಞಾನ (ಬಳಕೆ ಮತ್ತು ಅನ್ವಯ) ನಿಯಂತ್ರಣ ಮಸೂದೆಯಿಂದ ಖಾಸಗಿತನದ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಹಾಗಾಗಿ ದತ್ತಾಂಶ ರಕ್ಷಣೆ ಕಾನೂನು ಜಾರಿ ಆಗದೆ ಈ ಮಸೂದೆಯನ್ನು ಅಂಗೀಕರಿಸಬಾರದು ಎಂದು ಕಾಂಗ್ರೆಸ್‌ನ ಶಶಿ ತರೂರ್ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿದರು.
ಆದರೆ, ಈ ಆಕ್ಷೇಪಕ್ಕೆ ಸರ್ಕಾರ ಮನ್ನಣೆ ನೀಡಲಿಲ್ಲ.
‘ಇದು ಡಿಎನ್‌ಎ ಮತ್ತು ದತ್ತಾಂಶ ನಿಧಿಗೆ ಸಂಬಂಧಿಸಿದ ವಿಚಾರ ಆಗಿರುವುದರಿಂದ ದತ್ತಾಂಶದ ಸುರಕ್ಷತೆ ಮತ್ತು ಖಾಸಗಿತನ ರಕ್ಷಣೆಯನ್ನು ಖಾತರಿಪಡಿಸಲಾಗಿದೆ. ಸಂಗ್ರಹವಾಗುವ ದತ್ತಾಂಶ, ಮುಖದ ಲಕ್ಷಣಗಳು ಮತ್ತು ಜನಾಂಗೀಯ ಮಾಹಿತಿ ಬಹಿರಂಗ ಮಾಡುವುದಿಲ್ಲ’ ಎಂದುವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್ ಹೇಳಿದ್ದಾರೆ.2003ರಲ್ಲಿ ಈ ಮಸೂದೆ ಬಗ್ಗೆ ಚರ್ಚೆ ಆರಂಭವಾಯಿತು. ಹಲವು ಸುತ್ತಿನ ಸಮಾಲೋಚನೆ ಬಳಿಕ ಮಸೂದೆಯಲ್ಲಿ ಹಲವು ಸುಧಾರಣೆ ಆಗಿದೆ ಎಂದು ಅವರು ತಿಳಿಸಿದರು.
**
ಉದ್ದೇಶ
* ರಾಷ್ಟ್ರೀಯ ಡಿಎನ್‌ಎ ನಿಧಿ ಸ್ಥಾಪನೆ
* ಪ್ರಾದೇಶಿಕ ಡಿಎನ್‌ಎ ನಿಧಿ ಸ್ಥಾಪನೆ
* ಪ್ರತಿ ನಿಧಿಯಲ್ಲಿಯೂ ಅಪರಾಧ ಚಿತ್ರಣ ಸೂಚಿ, ಶಂಕಿತರು, ವಿಚಾರಣಾಧೀನರು ಮತ್ತು ಅಪರಾಧಿಗಳ ಡಿಎನ್‌ಎ ಮಾಹಿತಿ ಸಂಗ್ರಹ
* ಡಿಎನ್‌ಎ ನಿಯಂತ್ರಣ ಮಂಡಳಿ ಸ್ಥಾಪನೆ– ಈ ಮಂಡಳಿಯು ಡಿಎನ್‌ಎ ಪ್ರಯೋಗಾಲಯ, ನಿಧಿ ಸ್ಥಾಪನೆ, ಮಾರ್ಗಸೂಚಿ ರಚನೆ, ಪ್ರಕ್ರಿಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಿದೆ
* ಡಿಎನ್ಎ ಪರೀಕ್ಷೆ ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುವ ಹೊಣೆಯೂ ಮಂಡಳಿಗೆ
* ಡಿಎನ್‌ಎ ಮಾದರಿ ಸಂಗ್ರಹಕ್ಕೆ ವ್ಯಕ್ತಿಯ ಲಿಖಿತ ಒಪ್ಪಿಗೆ ಕಡ್ಡಾಯ
* ಏಳು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾದ ಅಪರಾಧಿಯ ಡಿಎನ್‌ಎ ಸಂಗ್ರಹಕ್ಕೆ ಒಪ್ಪಿಗೆ ಬೇಕಿಲ್ಲ
* ನ್ಯಾಯಾಲಯದ ಆದೇಶದ ಮೂಲಕ ಡಿಎನ್‌ಎ ಮಾದರಿ ಅಳಿಸಲು ಅವಕಾಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.