ಗುವಾಹಟಿ: ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಲು ಬಿಜೆಪಿ ಮಿತ್ರ ಪಕ್ಷಗಳು ಸೇರಿ ಈಶಾನ್ಯ ರಾಜ್ಯಗಳ 10 ರಾಜಕೀಯ ಪಕ್ಷಗಳು ಮತ್ತುಜೆಡಿಯು ಒಮ್ಮತದ ನಿರ್ಣಯವನ್ನು ಮಂಗಳವಾರ ಅಂಗೀಕರಿಸಿವೆ.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಹಾಗೂ ಅಸ್ಸಾಂ ಗಣ ಪರಿಷತ್ (ಎಜಿಪಿ) ಅಧ್ಯಕ್ಷ ಅತುಲ್ ಬೋರಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಕೊಳ್ಳಲಾಯಿತು.
‘ಈಶಾನ್ಯ ರಾಜ್ಯಗಳಲ್ಲಿ ಅನೇಕ ರಾಜಕೀಯ ಪಕ್ಷಗಳು ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಿವೆ. ನಮ್ಮ ಜನರನ್ನು ಹಾಗೂ ಪ್ರದೇಶವನ್ನು ರಕ್ಷಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಸಭೆ ಸೇರಿದ್ದೇವೆ. ಇದು ರಾಜಕೀಯ ಪ್ರೇರಿತ ಸಭೆಯಲ್ಲ’ ಎಂದು ಸಂಗ್ಮಾ ಸ್ಪಷ್ಟಪಡಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಮಿಜೋರಾಂ ಮುಖ್ಯಮಂತ್ರಿ ಜೋರಾಮ್‌ಥಂಗಾ ಅವರು, ‘ಮಸೂದೆ ಈಶಾನ್ಯ ಪ್ರದೇಶದ ಜನರಿಗೆ ಅಪಾಯಕಾರಿ ಹಾಗೂ ಹಾನಿಕಾರಕವಾಗಲಿದೆ. ಆದ್ದರಿಂದ ಈ ಭಾಗದ ಎಲ್ಲ ಪಕ್ಷಗಳು ಏಕಧ್ವನಿಯಲ್ಲಿ ವಿರೋಧಿಸಲು ನಿರ್ಣಯ ಅಂಗೀಕರಿಸಿವೆ’ ಎಂದರು.
‘ಈಶಾನ್ಯ ರಾಜ್ಯಗಳಲ್ಲಿರುವ ಎಲ್ಲ ಪಕ್ಷಗಳು ಮಸೂದೆ ವಿರೋಧಿಸಲು ಒಮ್ಮತಕ್ಕೆ ಬಂದಿವೆ. ರಾಜ್ಯಸಭೆಯಲ್ಲಿ ಈ ಮಸೂದೆ ಖಂಡಿತವಾಗಿಯೂ ಅಂಗೀಕಾರವಾಗುವುದಿಲ್ಲ’ ಎಂದು ಎಜಿಪಿ ಅಧ್ಯಕ್ಷ ಅತುಲ್ ಬೋರಾ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಯು ಈಶಾನ್ಯ ಭಾಗದ ಉಸ್ತುವಾರಿ ಲೋಥಾ, ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ),ಎಂಎನ್‌ಎಫ್ (ಮಿಜೋರಾಂ) ಸೇರಿ 10 ಪಕ್ಷಗಳ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.