ಚೆನ್ನೈ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕಳೆದ ವರ್ಷ ಬಂಧಿಸಲಾಗಿರುವ ತಮಿಳುನಾಡಿನ ಸಚಿವ ವಿ. ಸೆಂಥಿಲ್ ಬಾಲಾಜಿ ವಿರುದ್ಧ ಇದೇ 22ರಂದು ಇಲ್ಲಿನ ಸೆಷನ್ಸ್ ನ್ಯಾಯಾಲಯವು ಆರೋಪ ನಿಗದಿ ಮಾಡಲಿದೆ. ಅಲ್ಲದೆ, ಬಾಲಾಜಿ ಅವರು ಸಲ್ಲಿಸಿರುವ ಮೂರನೇ ಜಾಮೀನು ಅರ್ಜಿಯ ಕುರಿತು ಸಿಟಿ ಕೋರ್ಟ್ ಇದೇ ಶುಕ್ರವಾರ ಆದೇಶ ಪ್ರಕಟಿಸಲಿದೆ.
ಕೇಂದ್ರ ಕಾರಾಗೃಹದಲ್ಲಿರುವ ಸೆಂಥಿಲ್ ಬಾಲಾಜಿ ಅವರನ್ನು ಪ್ರಾಸಿಕ್ಯೂಷನ್, ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನ ಸೆಷನ್ಸ್ ನ್ಯಾಯಾಧೀಶ ಎಸ್. ಅಲ್ಲಿ ಅವರ ಎದುರು ಗುರುವಾರ ಹಾಜರುಪಡಿಸಿತು. ಜ.22ರವರೆಗೆ ಸೆಂಥಿಲ್ ಅವರ ಬಂಧನ ಅವಧಿಯನ್ನು ವಿಸ್ತರಿಸಿ ನ್ಯಾಯಾಧೀಶರು ಮಧ್ಯಂತರ ಆದೇಶ ಹೊರಡಿಸಿದರು.
ಪ್ರಕರಣ ವಿಚಾರಣೆಗೆ ಬಂದಾಗ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್. ರಮೇಶ್ ಅವರು, ‘ಪ್ರಕರಣದ ಸತ್ಯಾಸತ್ಯತೆಗಳನ್ನು ನ್ಯಾಯಾಲಯಕ್ಕೆ ವಿವರಿಸಿದ್ದೇವೆ. ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾದ 21 ಸಾಕ್ಷಿಗಳು ಮತ್ತು 77 ದಾಖಲೆಗಳನ್ನು ಪರಿಶೀಲಿಸುವ ಮೂಲಕ ಸೆಂಥಿಲ್ ಬಾಲಾಜಿ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಸ್ತಾಪಿಸುತ್ತಿದ್ದೇವೆ’ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.
ನಂತರ ನ್ಯಾಯಾಧೀಶರು, ಜ.22ರಂದು ಆರೋಪಿ ಮೇಲೆ ಆರೋಪ ನಿಗದಿ ಮಾಡಲಾಗುವುದು. ಆರೋಪಿಯನ್ನು ಅಂದು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಬೇಕು ಎಂದು ಮಧ್ಯಂತರ ಆದೇಶ ನೀಡಿ, ವಿಚಾರಣೆಯನ್ನು ಜನವರಿ 22ಕ್ಕೆ ಮುಂದೂಡಿದರು.
ಹಿಂದಿನ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದಾಗ ಉದ್ಯೋಗ ನೀಡಲು ಹಣ ಪಡೆದ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು 2023ರ ಜೂನ್ 14ರಂದು ಬಾಲಾಜಿ ಅವರನ್ನು ಬಂಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.