ನವದೆಹಲಿ: ಅಕ್ರಮ ನಿರ್ಮಾಣ ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ದೆಹಲಿಯಲ್ಲಿ ಭಾರಿ ವಿರೋಧದ ನಡುವೆಯೂ ಮುಂದುವರಿದಿದೆ.ಉತ್ತರ ದೆಹಲಿ ಮಹಾನಗರಪಾಲಿಕೆ ಮತ್ತು ದಕ್ಷಿಣ ದೆಹಲಿ ಮಹಾನಗರಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಗುರುವಾರ ನಡೆಸಿವೆ. ಈ ವೇಳೆ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಕಲ್ಲುತೂರಾಟ ಮತ್ತು ಲಾಠಿ ಪ್ರಹಾರ ನಡೆದಿದೆ.
ಪ್ರತಿಭಟನೆಯನೇತೃತ್ವ ವಹಿಸಿದ್ದ ಎಎಪಿ ಶಾಸಕಅಮಾನತ್‌ಉಲ್ಲಾ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮದನಪುರ ಖಾದರ್ ಮತ್ತು ಧಿರ್ಸೆನ್ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯನ್ನು ದಕ್ಷಿಣ ದೆಹಲಿ ಮಹಾನಗರ ಪಾಲಿಕೆ (ಎಸ್‌ಡಿಎಂಸಿ) ಕೈಗೊಂಡಿತ್ತು. ಉತ್ತರ ದೆಹಲಿ ಮಹಾನಗರ ಪಾಲಿಕೆಯು ರೋಹಿಣಿ ಮತ್ತು ಕರೋಲ್ ಭಾಗ್ ಪ್ರದೇಶಗಳಲ್ಲಿ ತೆರವು ಕಾರ್ಯ (ಎನ್‌ಡಿಎಂಸಿ) ಕೈಗೊಂಡಿತ್ತು.
ಮದನಪುರ ಖಾದರ್ ಪ್ರದೇಶದಲ್ಲಿ ಕಾರ್ಯಾಚರಣೆ ವಿರುದ್ಧ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದರು. ಶಾಸಕ ಖಾನ್ ನೇತೃತ್ವದಲ್ಲಿ ಹಲವರು ಪ್ರತಿಭಟನೆ ನಡೆಸಿದರು. ‘ಸಕ್ರಮ ನಿರ್ಮಾಣಗಳನ್ನು ಬಿಜೆಪಿ ನೇತೃತ್ವದ ಪಾಲಿಕೆ ನೆಲಸಮ ಮಾಡುತ್ತಿದೆ’ ಎಂದು ಅವರು ಆರೋಪಿಸಿದರು. ಬಿಜೆಪಿ ವಿರುದ್ಧ ಪ್ರತಿಭಟನಕಾರರು ಘೋಷಣೆ ಕೂಗಿದರು.
ತೆರವು ಕಾರ್ಯಾಚರಣೆಯನ್ನು ಬಡವರ ವಿರೋಧಿ ಎಂದು ಕರೆದಿರುವ ಅಮಾನತ್‌ಉಲ್ಲಾ ಖಾನ್, ಕಾರ್ಯಾಚರಣೆ ವಿರುದ್ಧ ಪ್ರತಿಭಟನೆ ನಡೆಸುವಂತೆ ಟ್ವಿಟರ್‌ನಲ್ಲಿ ಕರೆ ನೀಡಿದ್ದರು. ಆನಂತರ ಪ್ರತಿಭಟನೆ ತೀವ್ರತೆ ಪಡೆಯಿತು. ಪೊಲೀಸರು ಪ್ರತಿಭಟನಕಾರರ ಮೇಲೆ ಲಾಠಿ ಪ್ರಹಾರ ನಡೆಸಿ, 10 ಜನರನ್ನು ವಶಕ್ಕೆ ಪಡೆದರು.
‘ಪ್ರತಿಭಟನಕಾರರು ಕಲ್ಲುತೂರಾಟ ನಡೆಸಿದರು. ಅದನ್ನು ನಿಯಂತ್ರಿಸುವ ಸಲುವಾಗಿ ಲಾಠಿ ಪ್ರಹಾರ ನಡೆಸಿದ್ದೇವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜನರನ್ನುು ವಶಕ್ಕೆ ಪಡೆದಿದ್ದೇವೆ’ ಎಂದು ಪೊಲೀಸರು ಹೇಳಿದ್ದಾರೆ.
*
ಬಡವರ ಸೂರುಗಳನ್ನು ನೆಲಸಮ ಮಾಡಲಾಗುತ್ತಿದೆ. ಆದರೆ, ದೆಹಲಿ ಶ್ರೀಮಂತರ ಅಕ್ರಮ ನಿರ್ಮಾಣಗಳ ವಿಚಾರಕ್ಕೆ ಬಿಜೆಪಿ ಹೋಗುತ್ತಿಲ್ಲ.
-ಅಮಾನತ್‌ಉಲ್ಲಾ ಖಾನ್, ಎಎಪಿ ಶಾಸಕ
*
ಕಾನೂನುಬಾಹಿರ ನಿರ್ಮಾಣಗಳನ್ನು ತೆರವು ಮಾಡುತ್ತಿದ್ದೇವೆ. ಕಾರ್ಯಾಚರಣೆಗೆ ಯಾರೇ ಅಡ್ಡಿಪಡಿಸಿದರೂ, ತಕ್ಕ ಕ್ರಮ ಎದುರಿಸಬೇಕಾಗುತ್ತದೆ.
-ರಾಜ್‌ಪಾಲ್ ಸಿಂಗ್, ಎಸ್‌ಡಿಎಂಸಿ ಕೇಂದ್ರ ವಲಯದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.