ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವೃತ್ತಿಯ ಕೊನೆಯ ದಿನವಾಗಿತ್ತು. ಎರಡು ವರ್ಷ ಸಿಜೆಐ ಆಗಿದ್ದ ಅವರು ಭಾನುವಾರ ನಿವೃತ್ತರಾಗಲಿದ್ದು, ನ್ಯಾಯಮೂರ್ತಿ ಸಂಜೀವ ಖನ್ನಾ ಅವರಿಗೆ ದಂಡ ಹಸ್ತಾಂತರಿಸಲಿದ್ದಾರೆ.
ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ ದೇಶದ ಗಮನ ಸೆಳೆದ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿದ್ದು ಅವರ ಅಗ್ಗಳಿಕೆ. ಸಿಜೆಐ ಆಗಿದ್ದ ವೇಳೆ ಅವರು ನೀಡಿದ್ದ ಪ್ರಮುಖ 10 ತೀರ್ಪುಗಳು ಹೀಗಿವೆ..
2018ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಸಿಜೆಐ ಚಂದ್ರಚೂಡ್ ಅವರ ನೇತೃತ್ವದ ಪಂಚ ಸದಸ್ಯ ಸಂವಿಧಾನಿಕ ಪೀಠ ಈ ವರ್ಷ ಫೆಬ್ರುವರಿಯಲ್ಲಿ ರದ್ದು ಮಾಡಿತ್ತು.
ಈ ಯೋಜನೆಯಡಿ ರಾಜಕೀಯ ಪಕ್ಷಗಳು ಪಡೆದುಕೊಂಡಿದ್ದ ದೇಣಿಗೆಯ ಮಾಹಿತಿ ಗೋಪ್ಯವಾಗಿರುತ್ತಿತ್ತು. ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ, ಸಂಜೀವ್ ಖನ್ನಾ, ಜೆ.ಬಿ ಪಾರ್ದಿವಾಲ ಹಾಗೂ ಮನೋಜ್ ಮಿಶ್ರಾ ಅವರೂ ನ್ಯಾಯಪೀಠದಲ್ಲಿದ್ದರು.
ಖಾಸಗಿ ಒಡೆತನದಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಸಾರ್ವಜನಿಕ ಬಳಕೆಗಾಗಿ ಸರ್ಕಾರ ಸ್ವಾಧೀನಪಡಿಸಿಕೊಳ್ಳುವಂತಿಲ್ಲ. ಆದರೆ, ಸಮುದಾಯದ ವಶದಲ್ಲಿರುವ ಭೌತಿಕ ರೂಪದ ಸಂಪನ್ಮೂಲಗಳನ್ನು ಜನಸಮೂಹದ ಒಳಿತಿಗಾಗಿ ಸ್ವಾಧೀನಕ್ಕೆ ಪಡೆಯಬಹುದು ಎಂದು ಸಿಜೆಐ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು 7:2ರ ಬಹುಮತದ ತೀರ್ಪನ್ನು ನವೆಂಬರ್ 5ರಂದು ನೀಡಿತ್ತು.
‘ಈ ವಿಚಾರವಾಗಿ, ಕರ್ನಾಟಕ ಸರ್ಕಾರ ವರ್ಸಸ್ ರಂಗನಾಥ ರೆಡ್ಡಿ ಪ್ರಕರಣದಲ್ಲಿ (1977) ನ್ಯಾಯಮೂರ್ತಿ ಕೃಷ್ಣ ಅಯ್ಯರ್ ನೇತೃತ್ವದ ಪೀಠವು ನೀಡಿದ್ದ ತೀರ್ಪು ನಿರ್ದಿಷ್ಟವಾದ ಆರ್ಥಿಕ ಮತ್ತು ಸಮಾಜವಾದಿ ಸಿದ್ಧಾಂತದಿಂದ ಪ್ರೇರಿತವಾಗಿತ್ತು’ ಎಂದು ಪೀಠ ಅಭಿಪ್ರಾಯಪಟ್ಟಿತ್ತು.
‘ಖಾಸಗಿ ಒಡೆತನದಲ್ಲಿರುವ ಎಲ್ಲ ಸಂಪನ್ಮೂಲಗಳನ್ನು ಸರ್ಕಾರ ಸ್ವಾಧೀನಕ್ಕೆ ಪಡೆದುಕೊಳ್ಳಬಹುದು’ ಎಂದು ನ್ಯಾಯಮೂರ್ತಿ ಅಯ್ಯರ್ ನೇತೃತ್ವದ ಪೀಠವು ಆಗ ತೀರ್ಪು ನೀಡಿತ್ತು.
ಪೀಠದಲ್ಲಿದ್ದ ಇತರ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಜೆ.ಬಿ.ಪರ್ದೀವಾಲಾ, ಮನೋಜ್ ಮಿಶ್ರಾ, ರಾಜೇಶ್ ಬಿಂದಲ್, ಸತೀಶ್ಚಂದ್ರ ಶರ್ಮಾ ಹಾಗೂ ಆಗಸ್ಟಿನ್ ಜಾರ್ಜ್ ಮಸೀಹ್ ಅವರ ಪರವಾಗಿ ಬಹುಮತದ ತೀರ್ಪನ್ನು ಸಿಜೆಐ ಚಂದ್ರಚೂಡ್ ಬರೆದಿದ್ದರು. ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಹಾಗೂ ಸುಧಾಂಶು ಧುಲಿಯಾ ಅವರು ಭಿನ್ನತೀರ್ಪು ನೀಡಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ಇದ್ದ ವಿಶೇಷ ಸ್ಥಾನ ರದ್ದು ಮಾಡಿದ್ದ ಸಂಸತ್‌ನ ನಿರ್ಧಾರವನ್ನು ಸುಪ್ರೀಂ ಕೋರ್ಟ್ 2023ರ ಡಿಸೆಂಬರ್‌ನಲ್ಲಿ ಎತ್ತಿ ಹಿಡಿದಿತ್ತು.
ಸಿಜೆಐ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳಿದ್ದ ಸಂವಿಧಾನ ಪೀಠವು ಈ ಐತಿಹಾಸಿಕ ತೀರ್ಪು ನೀಡಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತಾತ್ಕಾಲಿಕ ಎಂದು ಕೋರ್ಟ್ ಹೇಳಿತ್ತು.
ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ 2023ರ ಅಕ್ಟೋಬರ್‌ನಲ್ಲಿ ತೀರ್ಪು ನೀಡಿತ್ತು.
ಲಿಂಗ ಸಮಾನತೆಯ ಕಾನೂನು ರೂಪಿಸುವ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವುದನ್ನು ಸಂಸತ್‌ಗೆ ಬಿಡಲಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿತ್ತು.
1971ಕ್ಕಿಂತ ಹಿಂದೆ ಬಾಂಗ್ಲಾದೇಶದಿಂದ ಅಸ್ಸಾಂಗೆ ಬಂದ ನಿರಾಶ್ರಿತರಿಗೆ ನಾಗರಿಕತೆ ನೀಡುವ ‘ಅಸ್ಸಾಂ ಒಪ್ಪಂದ’ದ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಅಕ್ಟೋಬರ್‌ನಲ್ಲಿ ಎತ್ತಿ ಹಿಡಿದಿತ್ತು.
1966–71ರ ನಡುವೆ ಭಾರತಕ್ಕೆ ಪ್ರವೇಶಿಸಿದ್ದ ಬಾಂಗ್ಲಾದೇಶ (ಅಂದಿನ ಪೂರ್ವ ಪಾಕಿಸ್ತಾನ) ನಿರಾಶ್ರಿತರು ಭಾರತೀಯ ನಾಗರಿಕರಾಗಿ ನೋಂದಾಯಿಸಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ 1985ಲ್ಲಿ ನಾಗರಿಕತ್ವ ಕಾಯ್ದೆಯ ಸೆಕ್ಷನ್ 6ಎ ಅನ್ನು ಜಾರಿಗೆ ತರಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು 4:1 ಬಹುಮತದೊಂದಿಗೆ ತೀರ್ಪು ನೀಡಿತ್ತು.
ಜೈಲುಗಳಲ್ಲಿ ಜಾತಿ ಆಧಾರದಲ್ಲಿ ಕೈದಿಗಳ ನಡುವೆ ತಾರತಮ್ಯವನ್ನು ನಿಷೇಧಿಸಿ ಅಕ್ಟೋಬರ್ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಕೆಲಸ ಹಂಚಿಕೆ, ಬ್ಯಾರಕ್‌ಗಳ ವಿಭಜನೆ ಮುಂತಾದ ಜಾತಿ ಆಧಾರಿತ ತಾರತಮ್ಯವನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್, ಅಂತಹ ಪೂರ್ವಾಗ್ರಹಗಳನ್ನು ಪ್ರೋತ್ಸಾಹಿಸುವ 10 ರಾಜ್ಯಗಳ ಜೈಲು ಕೈಪಿಡಿ ನಿಯಮಗಳನ್ನು ಸಂವಿಧಾನ ಬಾಹಿರ ಎಂದಿತ್ತು.
ಗೌರವದಿಂದ ಬದುಕುವ ಹಕ್ಕು ಸೆರೆಯಲ್ಲಿರುವವರಿಗೂ ಅನ್ವಯಿಸುತ್ತದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತ್ತು.
ದೇಶದ ಕೆಲವು ರಾಜ್ಯಗಳ ಜೈಲು ಕೈಪಿಡಿಗಳು ಜಾತಿ ಆಧಾರಿತ ತಾರತಮ್ಯ ಪ್ರೋತ್ಸಾಹಿಸುತ್ತಿವೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ, ಮಹತ್ವದ ತೀರ್ಪು ಪ್ರಕಟಿಸಿತ್ತು.
ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯ್ದೆ–2004ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು, ಕಾಯ್ದೆಯು ಜಾತ್ಯತೀತ ತತ್ವವನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನವೆಂಬರ್ 5ರಂದು ಮಹತ್ವದ ತೀರ್ಪು ನೀಡಿತ್ತು.
ಕಾಯ್ದೆಯು ಜಾತ್ಯತೀತ ತತ್ವವನ್ನು ಉಲ್ಲಂಘಿಸುತ್ತದೆ ಎಂಬ ಕಾರಣ ನೀಡಿ ಕಾಯ್ದೆಯನ್ನು ರದ್ದು ಮಾಡಿ ಮಾರ್ಚ್ 22ರಂದು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿತ್ತು..
‘ಈ ಕಾಯ್ದೆಯು ಜಾತ್ಯತೀತ ತತ್ವವನ್ನು ಉಲ್ಲಂಘಿಸುತ್ತದೆ ಎಂಬ ಹೈಕೋರ್ಟ್‌ನ ನಿಲುವು ದೋಷದಿಂದ ಕೂಡಿದೆ’ ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಹೇಳಿತ್ತು. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಅವರೂ ಈ ಪೀಠದಲ್ಲಿದ್ದರು.
ಪ್ರಶ್ನೆಪತ್ರಿಕೆ ಸೋರಿಕೆ ಆರೋಪದಡಿ ಯುಜಿಸಿ–ನೆಟ್ ಪರೀಕ್ಷೆಯನ್ನು ರದ್ದು ಮಾಡಿರುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಕೆಲ ಪರೀಕ್ಷಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್‌ನಲ್ಲಿ ತಿರಸ್ಕರಿಸಿತ್ತು.
ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವನ್ನೊಳಗೊಂಡ ಪೀಠವು, ಆಗಸ್ಟ್ 21ರಂದು ಸರ್ಕಾರ ಮರುಪರೀಕ್ಷೆ ನಡೆಸುತ್ತಿದೆ. ಹೀಗಾಗಿ, ಸುಮಾರು 9 ಲಕ್ಷದಷ್ಟಿರುವ ವಿದ್ಯಾರ್ಥಿಗಳಿಗೆ ಸ್ಪಷ್ಟತೆ ಇರಬೇಕಾಗುತ್ತದೆ ಎಂದು ಹೇಳಿತ್ತು.
ಸದನದಲ್ಲಿ ಮತ ಚಲಾಯಿಸಲು ಅಥವಾ ಮಾತನಾಡಲು ಲಂಚ ಪಡೆಯುವ ಶಾಸಕರು ಮತ್ತು ಸಂಸದರಿಗೆ ಕಾನೂನು ಕ್ರಮದಿಂದ ರಕ್ಷಣೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಮಾರ್ಚ್‌ನಲ್ಲಿ ತೀರ್ಪು ನೀಡಿತ್ತು.
ಇಂತಹ ಕೃತ್ಯ ಎಸಗಿದ ಶಾಸಕರು, ಸಂಸದರಿಗೆ ಕಾನೂನು ಕ್ರಮದಿಂದ ರಕ್ಷಣೆ ಇದೆ ಎಂದು ಜೆಎಂಎಂ ಲಂಚ ಪ್ರಕರಣದಲ್ಲಿ 1998ರಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ನೀಡಿದ್ದ ಬಹುಮತದ ತೀರ್ಪನ್ನು ಕೋರ್ಟ್ ಆ ಮೂಲಕ ರದ್ದುಪಡಿಸಿತ್ತು.
ಶಾಸನ ಸಭೆಗಳ ಸದಸ್ಯರು ಎಸಗುವ ಭ್ರಷ್ಟಾಚಾರ, ಅವರಲ್ಲಿನ ಲಂಚಗುಳಿತನವು ದೇಶದ ಸಂಸದೀಯ ಪ್ರಜಾತಂತ್ರದ ನೆಲೆಗಟ್ಟನ್ನೇ ಹಾಳುಮಾಡುತ್ತದೆ ಎಂದ ಹೇಳಿರುವ ನ್ಯಾಯಪೀಠವು, ‘ಸಂಸದೀಯ ಹಕ್ಕುಗಳು ಲಂಚ ಪಡೆಯುವುದಕ್ಕೆ ರಕ್ಷಣೆ ಒದಗಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿತ್ತು.
ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ಎಂ.ಎಂ. ಸುಂದರೇಶ್, ಪಿ.ಎಸ್. ನರಸಿಂಹ, ಜೆ.ಬಿ. ಪಾರ್ದೀವಾಲಾ, ಸಂಜಯ್ ಕುಮಾರ್ ಮತ್ತು ಮನೋಜ್ ಮಿಶ್ರಾ ಪೀಠದಲ್ಲಿದ್ದರು.
ಸಂಪ್ರದಾಯಗಳ ಹೆಸರಿನಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ(ಪಿಸಿಎಂಎ) ಅನುಷ್ಠಾನಕ್ಕೆ ಅಡ್ಡಿ ಉಂಟು ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಅಕ್ಟೋಬರ್‌ನಲ್ಲಿ ತೀರ್ಪು ನೀಡಿತ್ತು.
ಯಾವುದೇ ವೈಯಕ್ತಿಕ ಕಾನೂನಿನಡಿ ಸಂಪ್ರದಾಯಗಳನ್ನು ಉಲ್ಲೇಖಿಸಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ನು ದುರ್ಬಳಕೆ ಮಾಡುವಂತಿಲ್ಲ ಎಂದಿದ್ದ ಸುಪ್ರೀಂ ಕೋರ್ಟ್, ‘ಬಾಲ್ಯ ವಿವಾಹಗಳಿಂದಾಗಿ, ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿಯ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ’ ಎಂದಿತ್ತು.
ನ್ಯಾಯಪೀಠದಲ್ಲಿ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಇದ್ದರು.
(ಪಿಟಿಐ ಮಾಹಿತಿ ಬಳಸಿಕೊಂಡು ಬರೆದುಕೊಂಡ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.